Publish Date: Fri, 02 Oct 2026 (14:52 IST)
Updated Date: Fri, 02 Oct 2026 (13:41 IST)
ಬೆಂಗಳೂರು: ಕಾಂಗ್ರೆಸ್ ಗೆ ಮತಪಟ್ಟಿ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್) ಬಗ್ಗೆ ಭೀತಿ ಏಕೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಪ್ರಶ್ನಿಸಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಸ್‍ಐಆರ್ ಸಂಬಂಧ ಕಾಂಗ್ರೆಸ್ ದುರುದ್ದೇಶದ ಆರೋಪ ಮಾಡುತ್ತಿದೆ. ಎಸ್‍ಐಆರ್ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರಂಭವಾಗಿದ್ದಲ್ಲ. ದೇಶದಲ್ಲಿ ಈಗಾಗಲೇ ಹನ್ನೆರಡು ಬಾರಿ ಈ ಪ್ರಕ್ರಿಯೆ ಆಗಿದೆ. ಇಷ್ಟಾದರೂ ಅವರಿಗೆ ಭೀತಿ ಏಕೆ ಎಂದು ಕೇಳಿದರು.
ಸಂವಿಧಾನ ನಿಯಮಗಳ ಅನ್ವಯ ಕಾನೂನುಬದ್ಧವಾಗಿ ಎಸ್‍ಐಆರ್ ನಡೆಯುತ್ತಿದೆ. ಮೃತಪಟ್ಟವರು, ಸ್ಥಳಾಂತರಗೊಂಡವರು, ಎರಡು ಕಡೆ ಮತವಿದ್ದವರು- ಹೀಗೆ ವಿವಿಧ ಕಾರಣಗಳನ್ನು ನೀಡಿ ಮತಪಟ್ಟಿಯಲ್ಲಿ ಹೆಸರು ತೆಗೆಯಲಾಗುತ್ತದೆ. ಇಂತಹ ಸಂವಿಧಾನಬದ್ಧ ಕ್ರಿಯೆಯನ್ನೇ ಕಾಂಗ್ರೆಸ್ ಪ್ರಶ್ನಿಸುತ್ತಿದೆ ಎಂದು ದೂರಿದರು.
ನೆಹರು, ಇಂದಿರಾ ಗಾಂಧಿ ಹಾಗೂ ಸೋನಿಯಾ ಅವರ ಕಾಲದಲ್ಲಿ ಎಸ್‍ಐಆರ್ ನಡೆದರೆ ಓಕೆ. ಆದರೆ ಬಿಜೆಪಿ ಅಧಿಕಾರದಲ್ಲಿರುವಾಗ ನಡೆದರೆ ಸರಿಯಲ್ಲ ಎಂದು ಕಾಂಗ್ರೆಸ್ ಹೇಳುತ್ತಿದೆ ಎಂದು ದೂರಿದರು. ಬೆಂಗಳೂರಿನ ನಗರಪಾಲಿಕೆಗಳಲ್ಲಿ ನೂರಾರು ಬಾಂಗ್ಲಾದೇಶದವರು ಕೆಲಸ ಮಾಡುತ್ತಿದ್ದಾರೆ ಎಂದು ಬಯಲಾದರೂ ರಾಜ್ಯದ ಕಾಂಗ್ರೆಸ್ ಸರ್ಕಾರ ವಿಶೇಷ ತನಿಖಾ ತಂಡ ಏಕೆ ಮಾಡಿಲ್ಲ ಎಂದು ಪ್ರಶ್ನಿಸಿದರು.
ಬೆಂಗಳೂರು ಸೇರಿದಂತೆ ಹಲವಾರು ನಗರಗಳಲ್ಲಿ ಲಕ್ಷಾಂತರ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳ ಕಾಫಿ ತೋಟಗಳಲ್ಲಿ ಸಾವಿರಾರು ಅಕ್ರಮ ವಲಸಿಗರು ಇದ್ದಾರೆ. ಇವರೆಲ್ಲ ಭಾರತೀಯರಿಗೆ ಸಿಗಬೇಕಾದ ಉದ್ಯೋಗ ಕಸಿಯುತ್ತಿದ್ದಾರೆ. ಇವರನ್ನು ಮತಪಟ್ಟಿಗೆ ಸೇರಿಸುವ ಹುನ್ನಾರ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುವ ಕೆಲಸ. ಬರಗಾಲದಂತಹ ವಿಷಯಗಳನ್ನು ಮರೆ ಮಾಚಲು ಸಿಎಂ ಚುನಾವಣಾ ಆಯೋಗದ ಕಚೇರಿಯಲ್ಲಿ ಧರಣಿ ಮಾಡುತ್ತಾರೆ. ತಮ್ಮ ಮೇಲಿನ ಆಪಾದನೆ ಕಡಿಮೆ ಮಾಡಲು ಇಂತಹ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಎಸ್‍ಐಆರ್ ಅನ್ನು ಜಾರಿ ನಿರ್ದೇಶನಾಲಯ, ಸಿಬಿಐ ಮುಂತಾದ ಸಂಸ್ಥೆಗಳು ಮಾಡುವುದಿಲ್ಲ. ರಾಜ್ಯ ಸರ್ಕಾರ ಕಂದಾಯ, ಶಿಕ್ಷಣ ಮುಂತಾದ ಇಲಾಖೆಗಳ ನೌಕರರೇ ಮಾಡುವುದು. ಶೇ 99 ರಷ್ಟು ಕೆಲಸವನ್ನು ರಾಜ್ಯ ಸರ್ಕಾರದ ಅಧೀನದ ಇಲಾಖೆಗಳ ಅಧಿಕಾರಿಗಳೇ ಮಾಡುವುದು. ಆದರೆ ಆಪಾದನೆ ಮಾಡುವುದು ಕೇಂದ್ರ ಸರ್ಕಾರದ ಮೇಲೆ. ಏನೇ ತಪ್ಪಾಗಿದ್ದರೆ ರಾಜ್ಯ ಸರ್ಕಾರವೇ ಹೊಣೆ. ಬಾಂಗ್ಲಾದೇಶಿ ಸೇರಿದ್ದರೆ ಪ್ರಶ್ನಿಸುವುದು ನಮ್ಮ ಹಕ್ಕು. ಅವನು ನ್ಯಾಯ ಸಮ್ಮತ ಮತದಾರ ಎಂದು ರಾಜ್ಯ ಸರ್ಕಾರವೇ ಸಾಬೀತು ಮಾಡಬೇಕು ಎಂದರು.
ಅಕ್ರಮ ನಡೆದರೆ ಸಾವಿರ ದೂರು ಕೊಡುತ್ತೇವೆ. ಆದರೆ ಇವರು ದೂರು ನೀಡಿದವರ ಮೇಲೆಯೇ ಎಫ್‍ಐಆರ್ ಹಾಕುತ್ತಾರೆ. ಸರಿಯಾದ ರೀತಿ ದೂರುಗಳ ಪರಿಶೀಲನೆ ನಡೆದರೆ ಬಾಂಗ್ಲಾದೇಶಿ ಮತದಾರರು ಕೈಬಿಟ್ಟು ಹೋಗುತ್ತಾರೆ ಎಂಬ ಭೀತಿ ಕಾಂಗ್ರೆಸ್ ಕಾಡುತ್ತಿದೆ. ಬಿಜೆಪಿ ಸೋಲಿಸಲು ತಕ್ಷಣಕ್ಕೆ ಬಾಂಗ್ಲಾದವರು ಕಾಂಗ್ರೆಸ್ ಮತದಾರರು. ನಾಳೆ ಅವರು ಕಾಂಗ್ರೆಸ್ ಅನ್ನೂ ಸೋಲಿಸುತ್ತಾರೆ. ತಕ್ಷಣದ ರಾಜಕೀಯ ಲಾಭ ಪಡೆಯಲು ದೇಶಕ್ಕೆ, ಸಂವಿಧಾನಕ್ಕೆ ಅಪಚಾರ ಮಾಡುತ್ತಿದ್ದಾರೆ ಎಂದು ದೂರಿದರು.
ಮುಖ್ಯ ಚುನಾವಣಾ ಆಯಕ್ತರು ಆರ್‍ಒ ಮತ್ತು ಎಆರ್‍ಒಗಳಿಗೆ ಸೂಚನೆ ನೀಡಿ, ಎಲ್ಲವನ್ನು ಪರಿಶೀಲನೆ ಮಾಡಲಿ. ಫಾರಂ ನಂ 6 ಅನ್ನು ಸಲ್ಲಿಸಿ ಹೊಸ ಮತದಾರರನ್ನು ಸೇರಿಸುವುದನ್ನು ಯಾರಿಂದಲೂ ತಡೆಯಲು ಆಗಲ್ಲ. ಫಾರಂ 7 ಆಕ್ಷೇಪಣೆ ಸಲ್ಲಿಸಲು ಇದೆ. ಅನುಮಾನಾಸ್ಪದ ಮತದಾರರು ಕಂಡುಬಂದರೆ ಅವರನ್ನು ಕೈಬಿಡಬಹುದು. ಮತಪಟ್ಟಿಗೆ ಸೇರಿದವರಲ್ಲಿ ಕೆಲವರ ವಯಸ್ಸಿನಲ್ಲಿ ಅನುಮಾನಗಳಿವೆ. ಇದನ್ನು ನಾವು ಆಕ್ಷೇಪಿಸಿದ್ದೇವೆ. ಇದನ್ನೆಲ್ಲ ಪರಿಶೀಲನೆ ಮಾಡಬೇಕಾಗಿದ್ದು ಅಧಿಕಾರಿಗಳ ಕರ್ತವ್ಯ ಎಂದು ತಿಳಿಸಿದರು.
ಕಾಂಗ್ರೆಸ್ ಬೆದರಿಕೆ ಮಣಿಯದೆ ಎಸ್‍ಐಆರ್ ಪ್ರಕ್ರಿಯೆಯ ಅಧಿಕಾರಿಗಳು ಕೆಲಸ ಮಾಡಲಿ. ಇವಿಎಂ ಮೇಲೆ ಆರೋಪ ಮಾಡಿದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಡಿ.ಕೆ.ಶಿವಕುಮಾರ್ ಅವರು ಆರೋಪವನ್ನು ಸಾಬೀತು ಮಾಡಿಲ್ಲ. ಅವರ ಮೇಲೆ ಸುಳ್ಳು ಆಪಾದನೆ ಮೇಲೆ ಪ್ರಕರಣ ದಾಖಲಿಸಬಹುದು. ಇವರ ಮೇಲೆ ಎಫ್‍ಐಆರ್ ದಾಖಲಿಸಬಹುದು. ಇವರು ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆ ತಂದಿದ್ದಾರೆ. ಇವಿಎಂ ಅನ್ನು ಹ್ಯಾಕ್ ಮಾಡಬಹುದು ಎಂಬುದನ್ನು ನ್ಯಾಯಾಲಯದ ಮುಂದೆ ತೋರಿಸಲಿ. ಇವಿಎಂ ಹ್ಯಾಕ್ ಆಗುವುದಿದ್ದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿರಲಿಲ್ಲ. ಕೇರಳ, ತೆಲಂಗಾಣದಲ್ಲಿ, ಹಿಮಾಚಲಪ್ರದೇಶದಲ್ಲಿ ಅಧಿಕಾರಕ್ಕೆ ಬತರುತ್ತಿರಲಿಲ್ಲ ಎಂದು ವಿವರಿಸಿದರು.
ಇವಿಎಂ ಹ್ಯಾಕ್ ಮಾಡಿದ್ದರೆ ರಾಹುಲ್ ಗಾಂಧಿ, ಪ್ರಿಯಾಂಕ್ ಖರ್ಗೆ, ಮಲ್ಲಿಕಾರ್ಜುನ ಖರ್ಗೆ ಅಳಿಯ ಗೆಲ್ಲುತ್ತಲೇ ಇರಲಿಲ್ಲ. ಡಿಕೆಶಿ ಮುಖ್ಯಮಂತ್ರಿಯಾಗುತ್ತಿರಲಿಲ್ಲ. ಇವಿಎಂ ಮೇಲೆ ಸುಳ್ಳು ಆಪಾದನೆ ಮಾಡಿದ ಇವರೆಲ್ಲ ಸಾರ್ವಜನಿಕ ಕ್ಷಮೆ ಯಾಚಿಸಲಿ. ತಾನು ಕಳ್ಳ ಪರರ ನಂಬ ಎಂಬಂತೆ ಬಿಜೆಪಿ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಅಲ್ಲದ ಸಾಂವಿಧಾನಿಕ ಸಂಸ್ಥೆಗಳನ್ನು ಅನುಮಾನದಿಂದ ನೋಡುವ ರೀತಿ ಮಾಡುತ್ತಿದ್ದಾರೆ. ಇದು ಸಂವಿಧಾನಕ್ಕೆ ಮಾಡಿದ ದ್ರೋಹ ಎಂದು ಹೇಳಿದರು.
ಬಿಎಲ್‍ಒಗಳ ಆಕ್ಷೇಪಣೆಗಳನ್ನು ಆಯೋಗ ಸರಿಯಾಗಿ ಪರಿಶೀಲಿಸಲಿ. ಬಾಂಗ್ಲಾದವರ ವಿರುದ್ಧ ವಿಶೇಷ ತನಿಖೆಯನ್ನು ಸರ್ಕಾರ ನಡೆಸಲಿ. ಆಂತರಿಕ ಭದ್ತತೆ ಜೊತೆ ಸರ್ಕಾರ ಆಟ ಆಡದಿರಲಿ. ಸಿಎಂ ಬೆದರಿಕೆ ತಂತ್ರ ಅನುಸರಿಸುವುದು ಬೇಡ. ಅಕ್ರಮ ಮತದಾರರನ್ನು ಉಳಿಸಲು ಎಲ್ಲ ಸಂಚು ಮಾಡುತ್ತಿದ್ದಾರೆ ಎಂದರು.
ಒಂದು ದಿನಕ್ಕೆ ಎಷ್ಟು ಆಕ್ಷೇಪಣೆ ಸಲ್ಲಿಬಹುದೋ ಅಷ್ಟನ್ನೇ ಬಿಎಲ್‍ಎ ಸಲ್ಲಿಸಿದ್ದಾರೆ. ನೂರಾರು ಆಕ್ಷೇಪಣೆ ಸಲ್ಲಿಸಿದ್ದಾರೆ ಎಂಬ ಕಾಂಗ್ರೆಸ್ ಆರೋಪ ಸುಳ್ಳು. ಆಕ್ಷೇಪಣೆ ಸಲ್ಲಿಸಿದಾಗ ಹೆಸರು ತೆಗೆಯಲ್ಲ. ಎಲ್ಲವನ್ನೂ ಪರಿಶೀಲನೆ ಮಾಡುವವರು ಬಿಎಲ್‍ಒಗಳು. ಸತ್ಯಾಸತ್ಯತೆಯ ಪರಿಶೀಲನೆ ಮಾಡಲಿ ಎಂದು ಪ್ರಶ್ನೆಗೆ ಉತ್ತರಿಸಿದರು.
ಮಸೀದಿಗಳಲ್ಲಿ, ಕಲ್ಯಾಣ ಮಂಟಪಗಳಲ್ಲಿ ನೂರಾರು ಜನರನ್ನು ಸೇರಿಸಿ ಎನ್ಯೂಮರೇಷನ್ ಫಾರಂ ಕೊಡುವಾಗ ಇವರಿಗೆ ಕಾನೂನಿನ ನೆನಪಾಗಲಿಲ್ಲ. ಆಗ ಮೌನವಾಗಿದ್ದರು. ಅಕ್ರಮ ನಡೆಸಲು ಪಿಆರ್‍ಸಿ ಕೊಡಲು ಮುಂದಾಗಿದ್ದರು ಎಂದರು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ