Publish Date: Thu, 08 Oct 2026 (11:29 IST)
Updated Date: Thu, 08 Oct 2026 (11:36 IST)
ಶಿವಮೊಗ್ಗ: ಬಿಜೆಪಿಯಿಂದ ಉಚ್ಚಾಟನೆಗೊಂಡಿದ್ದ ರಾಜ್ಯದ ಹಿರಿಯ ನಾಯಕ, ಮಾಜಿ ಉಪಮುಖ್ಯಮಂತ್ರಿ ಕೆ. ಎಸ್. ಈಶ್ವರಪ್ಪ ಅವರು ಮತ್ತೆ ಮಾತೃಪಕ್ಷ ಬಿಜೆಪಿಗೆ ಮರಳುವ ಸ್ಪಷ್ಟ ಸುಳಿವು ನೀಡಿದ್ದು, ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಈಶ್ವರಪ್ಪ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ನಾಯಕರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ತಮ್ಮನ್ನು ಭೇಟಿಯಾಗಿ ಮತ್ತೆ ಪಕ್ಷಕ್ಕೆ ಸೇರ್ಪಡೆಯಾಗುವಂತೆ ಆಹ್ವಾನ ನೀಡಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. "ನನ್ನ ಜೀವನಕ್ಕೆ ಮಾರ್ಗದರ್ಶನ ನೀಡಿದ್ದೇ ಸಂಘ ಪರಿವಾರ. ಹಾಗಾಗಿ ಅವರ ಪ್ರಸ್ತಾವನೆಯನ್ನು ಗಂಭೀರವಾಗಿ ಪರಿಗಣಿಸಿದ್ದೇನೆ" ಎಂದು ಅವರು ತಿಳಿಸಿದ್ದಾರೆ.
ಬೆಂಬಲಿಗರು ಮತ್ತು ಕಾರ್ಯಕರ್ತರ ಜೊತೆ ಸಮಾಲೋಚನೆ:
ಪಕ್ಷ ಸೇರ್ಪಡೆ ನಿರ್ಧಾರಕ್ಕೂ ಮುನ್ನ ತಮ್ಮ ಬೆಂಬಲಿಗರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲು ಈಶ್ವರಪ್ಪ ಮೂರು ಹಂತಗಳ ಸುದೀರ್ಘ ಸಭೆಗಳನ್ನು ನಡೆಸಿದ್ದಾರೆ. 'ರಾಷ್ಟ್ರಭಕ್ತರ ಬಳಗ'ದ ಪದಾಧಿಕಾರಿಗಳು ಸೇರಿದಂತೆ ಶಿವಮೊಗ್ಗದ ಸುಮಾರು 50 ಪ್ರಮುಖ ಮುಖಂಡರೊಂದಿಗೆ ಅವರು ಚರ್ಚಿಸಿದ್ದಾರೆ.
ಈ ವೇಳೆ ಕಾರ್ಯಕರ್ತರು, "ಕಳೆದ ಬಾರಿಯಂತೆ ಆತುರದ ನಿರ್ಧಾರ ಕೈಗೊಂಡು ಮೋಸ ಹೋಗಬೇಡಿ. ಈ ಬಾರಿ ಹೈಕಮಾಂಡ್ ಅಥವಾ ಸಂಘದ ಹಿರಿಯ ನಾಯಕರಿಂದ ಸ್ಪಷ್ಟ ಭರವಸೆ ಸಿಕ್ಕರೆ ಮಾತ್ರ ಪಕ್ಷಕ್ಕೆ ಮರಳಿ" ಎಂದು ಸಲಹೆ ನೀಡಿದ್ದಾರೆ.
ಚುನಾವಣೆಗೆ ಸ್ಪರ್ಧಿಸುವುದು ಖಚಿತ:
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಾವು ಅಥವಾ ತಮ್ಮ ಪುತ್ರ ಕೆ. ಇ. ಕಾಂತೇಶ್ ಸ್ಪರ್ಧಿಸುವುದು ನೂರಕ್ಕೆ ನೂರರಷ್ಟು ಖಚಿತ ಎಂದು ಸ್ಪಷ್ಟಪಡಿಸಿರುವ ಈಶ್ವರಪ್ಪ, ಇತರ ಯಾವುದೇ ಪಕ್ಷ ಸೇರುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷದಿಂದಲೂ ತಮಗೆ ಆಹ್ವಾನ ಬಂದಿರುವುದಾಗಿ ಅವರು ಹೇಳಿದ್ದಾರೆ.
ಇನ್ನು ಮುಂದಿನ ಎಂಟು ದಿನಗಳಲ್ಲಿ ಬೆಂಬಲಿಗರೊಂದಿಗೆ ಮತ್ತಷ್ಟು ಚರ್ಚಿಸಿ ಅಂತಿಮ ತೀರ್ಮಾನ ಪ್ರಕಟಿಸುವುದಾಗಿ ಈಶ್ವರಪ್ಪ ತಿಳಿಸಿದ್ದು, ಅವರ 'ಘರ್ ವಾಪಸಿ' ಬಿಜೆಪಿ ಹೈಕಮಾಂಡ್‌ನ ಯಾವ ನಿಲುವಿನ ಮೇಲೆ ಆಧಾರಿತವಾಗಿರುತ್ತದೆ ಎಂಬುದು ಈಗ ತೀವ್ರ ಕುತೂಹಲ ಕೆರಳಿಸಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ