Publish Date: Sat, 01 Apr 2023 (15:52 IST)
Updated Date: Sat, 01 Apr 2023 (14:10 IST)
ಪೊಲೀಸರ ಕಣ್ಣಿಗೆ ಮಣ್ಣೆರೆಚಿ ತಲೆಮರೆಸಿಕೊಂಡು ಓಡಾಡುತ್ತಿರುವ ಖಲಿಸ್ತಾನಿ ಬೆಂಬಲಿಗ ಅಮೃತ್ ಪಾಲ್ ಸಿಂಗ್ ಯೂಟ್ಯೂಬ್ ಲೈವ್ ಬಂದು ತಾನು ಪೊಲೀಸರಿಗೆ ಶರಣಾಗುತ್ತಿಲ್ಲ ಎಂದು ಹೇಳಿಕೊಂಡಿದ್ದಾನೆ. 12 ದಿನಗಳಿಂದ ಪೊಲೀಸರಿಂದ ತಪ್ಪಿಸಿಕೊಂಡು ಓಡಾಡುತ್ತಿರುವ ತೀವ್ರಗಾಮಿ ಅಮೃತ್ಪಾಲ್ ಸಿಂಗ್ ವಿಡಿಯೋ ಬಿಡುಗಡೆ ಮಾಡಿದ್ದಾನೆ. ಎರಡನೇ ಬಾರಿಗೆ ಯೂಟ್ಯೂಬ್ ವಿಡಿಯೋ ಬಿಡುಗಡೆ ಮಾಡಿದ್ದಾನೆ. ಕಳೆದ ಎರಡು ವಾರದಿಂದ ವೇಷ ಮರೆಸಿಕೊಂಡು ರಾಜ್ಯದಿಂದ ರಾಜ್ಯಕ್ಕೆ ಅಲೆದಾಡುತ್ತಿರುವ ಅಮೃತಪಾಲ್ ಸಿಂಗ್, ಪಂಜಾಬ್‌ನ ಗೋಪ್ಯ ಸ್ಥಳದಲ್ಲಿ ಅಡಗಿರುವುದು ಗೊತ್ತಾಗಿದೆ. ಮೊದಲ ವಿಡಿಯೋದಲ್ಲಿ ಪಂಜಾಬ್‌ಗೆ ಮರಳಲಿರುವ ಬಗ್ಗೆ ಮಾಹಿತಿ ನೀಡಿದ್ದ. ಆದರೆ ಈಗ ಪೊಲೀಸರಿಗೆ ಶರಣಾಗುವುದಿಲ್ಲ ಎಂದು ಹೇಳಿದ್ದಾನೆ. ಕಳೆದ ಮಾರ್ಚ್ 18ರಂದು ಪೊಲೀಸ್ ಕಾರ್ಯಾಚರಣೆ ಆರಂಭಗೊಂಡ ಬಳಿಕ ಜಲಂಧರ್‌ನಿಂದ ತಪ್ಪಿಸಿಕೊಂಡು ಹರಿಯಾಣ, ದೆಹಲಿ, ಉತ್ತರಾಖಂಡದಲ್ಲಿ ಅಲೆದಾಡಿ ಕೊನೆಗೆ ಪಂಜಾಬ್‌ಗೆ ಮರಳಿದ್ದಾನೆ ಎಂದು ಪೊಲೀಸರು ಶಂಕಿಸಿದ್ದು, ಶೋಧ ತೀವ್ರಗೊಳಿಸಿದ್ದಾರೆ.