Select Your Language

Notifications

webdunia
webdunia
webdunia
webdunia

ನೆಮ್ಮದಿ ಕಳೆದುಕೊಂಡ ಸಿಎಂಗೆ ನನ್ನಿಂದ್ದ ನಿರಾಳತೆ ಸಿಕ್ಕಿರುವುದು ಸಂತಸವಾಗಿದೆ: ಆರ್‌ ಅಶೋಕ್

Chief Minister Siddaramaiah, MUDA Scam, Opposition Leader R Ashok

Sampriya

ಬೆಂಗಳೂರು , ಬುಧವಾರ, 9 ಅಕ್ಟೋಬರ್ 2024 (16:56 IST)
ಬೆಂಗಳೂರು:  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ಹೇಳಿಕೆಯಿಂದ ನಿರಾಳರಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಸ್ವಪಕ್ಷದ ಹಿತಶತೃಗಳಿಂದ, ಕೋರ್ಟು, ಕೇಸು, ತನಿಖೆಗಳಿಂದ ಅವರು ನಿರಾಳತೆ, ನೆಮ್ಮದಿ ಕಳೆದುಕೊಂಡು ಅನೇಕ ದಿನಗಳಾಗಿವೆ ಎಂದು ಇಡೀ ರಾಜ್ಯದ ಜನತೆಗೆ ಗೊತ್ತಿದೆ. ಕಡೆ ಪಕ್ಷ ನನ್ನ ಹೇಳಿಕೆಯಿಂದಾದರೂ ಅವರಿಗೆ ಅಲ್ಪ ನಿರಾಳತೆ ಸಿಕ್ಕಿರುವುದು ಸಂತಸದ ವಿಷಯವೇ ಎಂದು ಆರ್‌ ಅಶೋಕ್ ಕೌಂಟರ್ ನೀಡಿದ್ದಾರೆ.

ಜಾತಿ ಗಣತಿ ಬಗ್ಗೆ ಆರ್‌ ಅಶೋಕ್‌ ಹೇಳಿಕೆಯಿಂದ ಮನಸ್ಸು ನಿರಾಳವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಈ ಬಗ್ಗೆ ವಿಪಕ್ಷ ನಾಯಕ ಆಶೋಕ್‌ ಸಾಮಾಜಿಕ ಜಾಲತಾಣದಲ್ಲಿ ಸಿಎಂ ಸಿದ್ದರಾಮಯ್ಯ ಮುಂದೆ ಹಲವು ಪ್ರಶ್ನೆ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯನವರೇ, ತಾವು ಮಾತಿನಲ್ಲಿ ಬಹಳ ಜಾಣರು. ಹೇಳಿಕೇಳಿ ಒಂದಷ್ಟು ದಿನ ಲಾಯರ್ ಗಿರಿ ಮಾಡಿದವರು. ಒಂದು ಹೇಳಿಕೆಯನ್ನು ಯಾವ ರೀತಿಯಾದರೂ ತಿರುಚುವ, ಮೂಗಿನ ನೇರಕ್ಕೆ ಬಳಸಿಕೊಳ್ಳುವ ಚಾಕಚಕ್ಯತೆ ನಿಮಗಿದೆ ಎಂದು ಇತ್ತೀಚೆಗೆ ಅನೇಕ ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಸಾಬೀತಾಗಿದೆ. ಅದು ಬಿಡಿ.

ಇತ್ತೀಚೆಗೆ ಹಠಾತ್ ಆಗಿ ಜಾಗೃತವಾಗಿರುವ ತಮ್ಮ 'ಆತ್ಮಸಾಕ್ಷಿಯ'ನ್ನ ಓರೆಗೆ ಹಚ್ಚುವ ಮತ್ತಷ್ಟು ಪ್ರಶ್ನೆಗಳನ್ನ ಕೇಳುವ ಬಯಕೆ ಇದೆ.

1.) ತಮ್ಮನ್ನ ಮತ್ತು ತಮ್ಮ ಕಾಂಗ್ರೆಸ್ ಪಕ್ಷವನ್ನು ದಲಿತರು, ಹಿಂದುಳಿದವರ ಚಾಂಪಿಯನ್, ಸಾಮಾಜಿಕ ನ್ಯಾಯದ ಹರಿಕಾರರು ಎನ್ನುವ ರೀತಿ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತೀರಲ್ಲ, ಇಷ್ಟಕ್ಕೂ ದಲಿತರು, ತಳ ಸಮುದಾಯದವರಿಗೆ ಕಾಂಗ್ರೆಸ್ ಪಕ್ಷದ ಕೊಡುಗೆಯದರೂ ಏನು? ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವೇ ನಿಮ್ಮ ಔದರ್ಯತೆಗೆ ತಾಜಾ ಉದಾಹರಣೆ.

2.) ಮಾತೆತ್ತಿದರೆ ಆರ್ ಎಸ್ಎಸ್, ಬಿಜೆಪಿ ಸಾಮಾಜಿಕ ನ್ಯಾಯದ ವಿರುದ್ಧ ಇರುವವರು ಎಂದು ಹೇಳುತ್ತೀರಲ್ಲ, ಇದೇ ಬಿಜೆಪಿ ಮತ್ತು ಆರ್ ಎಸ್ಎಸ್ ಪ್ರಧಾನಿ ಮೋದಿ ಅವರಂತಹ ಸಾಮಾನ್ಯ ಕುಟುಂಬದಿಂದ ಬಂದ ಒಬಿಸಿ ನಾಯಕನನ್ನು ಹತ್ತು ವರ್ಷ ಪ್ರಧಾನಿ ಮಾಡಿರುವುದು ಅಲ್ಲವೇ ಸಿದ್ದರಾಮಯ್ಯನವರೇ?

3.) ತಮ್ಮ ಪಕ್ಷಕ್ಕೆ ದಲಿತರ ಬಗ್ಗೆ ಅಷ್ಟು ಕಾಳಜಿ ಇದ್ದಿದ್ದರೆ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಆದಿಯಾಗಿ ಇಂಡಿ ಮೈತ್ರಿಕೂಟದ ಅನೇಕ ನಾಯಕರು 2024ರ ಲೋಕಸಭಾ ಚುನಾವಣೆಗೂ ಮುನ್ನ ಸನ್ಮಾನ್ಯ ಮಲ್ಲಿಕಾರ್ಜುನ ಖರ್ಗೆ ಅವರನ್ನ ಪ್ರಧಾನಿ ಅಭ್ಯರ್ಥಿ ಮಾಡಿ ಎಂದಾಗ ತಮ್ಮನ್ನೂ ಸೇರಿದಂತೆ ಯಾವ ಕಾಂಗ್ರೆಸ್ ನಾಯಕರೂ ಯಾಕೆ ಅದಕ್ಕೆ ದನಿಗೂಡಿಸಲಿಲ್ಲ? ಒಬ್ಬ ಪರಿಶಿಷ್ಟ ಪಂಗಡದ ಮಹಿಳೆಯನ್ನ ದೇಶದ ರಾಷ್ಟ್ರಪತಿ ಮಾಡಲು ಹೊರಟಾಗ ಅದನ್ನ ವಿರೋಧಿಸಿ, ಒಬ್ಬ ಮೇಲ್ಜಾತಿ ಪುರುಷನನ್ನ ಅಭ್ಯರ್ಥಿಯಾಗಿ ಹಾಕಿದ್ದು ನಿಮ್ಮದೇ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳಲ್ಲವೇ? ಇನ್ನು ಕರ್ನಾಟಕದಲ್ಲಿ ದಲಿತರು ಮುಖ್ಯಮಂತ್ರಿ ಆಗುವುದನ್ನ ತಡೆದಿದ್ದು ಯಾರು ಅಂತ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ಅಲ್ಲವೇ?

4.) ಇನ್ನು ಒಬಿಸಿ ವಿಚಾರಕ್ಕೆ ಬರೋಣ. ಕಾಕಾ ಕಾಲೇಲ್ಕರ್ ಆಯೋಗವು 1950ರ ದಶಕದಲ್ಲಿ ಒಬಿಸಿಗಳಿಗೆ ಒಳಮೀಸಲಾತಿ ನೀಡುವಂತೆ ಸೂಚಿಸಿತ್ತು. ಆದರೆ ಕಾಂಗ್ರೆಸ್ ಪಕ್ಷ ಅದನ್ನ ನಾಲ್ಕು ದಶಕಗಳ ಕಾಲ ಜಾರಿಗೆ ತರಲಿಲ್ಲ. ಅಷ್ಟೇ ಅಲ್ಲ ಮಂಡಲ್ ಆಯೋಗದ ಶಿಫಾರಸ್ಸುಗಳನ್ನೂ ಕಾಂಗ್ರೆಸ್ ಪಕ್ಷ ಆರು ವರ್ಷಗಳ ಕಾಲ ಜಾರಿ ಮಾಡಲಿಲ್ಲ. ಅಂತಿಮವಾಗಿ ಅದನ್ನು ಜಾರಿ ಮಾಡಲು ಬಿಜೆಪಿ ಬೆಂಬಲಿತ ಸರ್ಕಾರವೇ ಬರಬೇಕಾಯಿತು. ಇದೇನಾ ನಿಮ್ಮ ಕಾಂಗ್ರೆಸ್ ಪಕ್ಷಕ್ಕೆ ಸಾಮಾಜಿಕ ನ್ಯಾಯದ ಬಗ್ಗೆ ಇರುವ ಬದ್ಧತೆ?

5.) ಅದು ಹೋಗಲಿ, ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಲು ಅಂದಿನ ಯುಪಿಎ ಸರ್ಕಾರಕ್ಕೆ ಎಲ್ಲ ರಾಜಕೀಯ ಪಕ್ಷಗಳು ಮನವಿ ಸಲ್ಲಿಸಿದ್ದರೂ ಸಹ ಹತ್ತು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷ ಏನೂ ಮಾಡಲಿಲ್ಲ. ಕಡೆಗೆ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಲೂ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರವೇ ಬರಬೇಕಾಯಿತು. ಇದೇನಾ ತಮ್ಮ ಕಾಂಗ್ರೆಸ್ ಪಕ್ಷ ಹಿಂದುಳಿದ ವರ್ಗಗಳ ಬಗ್ಗೆ ತೋರುವ ಕಾಳಜಿ?

6.) ಇನ್ನು ನೆಹರೂ, ರಾಜೀವ್ ಗಾಂಧಿ, ಇಂದಿರಾ ಗಾಂಧಿ ಆದಿಯಾಗಿ ತಮ್ಮ ಸರ್ವೋಚ್ಚ ನಾಯಕರುಗಳು ಮೀಸಲಾತಿ ಬಗ್ಗೆ ಏನು ಹೇಳಿದ್ದಾರೆ ಎಂಬುದರ ಬಗ್ಗೆ ಅವರೇ ಬರೆದಿರುವ ಪತ್ರಗಳ ದಾಖಲೆ ಇದೆ. ಇನ್ನೆಷ್ಟು ದಿನ ಇದೆ ಹಳೆ ರೀಲು ಬಿಟ್ಟು ಜನರನ್ನ ಮೋಸ ಮಾಡುವ ವ್ಯರ್ಥ ಪ್ರಯತ್ನ ಮಾಡುತ್ತೀರಿ? ನಿನ್ನೆಯಷ್ಟೇ ಬಂದಿರುವ ಹರಿಯಾಣ ರಾಜ್ಯದ ಫಲಿತಾಂಶವೇ ದಲಿತರು, ಹಿಂದುಳಿದವರು ಕಾಂಗ್ರೆಸ್ ಪಕ್ಷದಿಂದ ಎಷ್ಟು ದೂರ ಸರಿದಿದ್ದಾರೆ ಎನ್ನುವುದಕ್ಕೆ ತಾಜಾ ಉದಾಹರಣೆ.

7.) ಇನ್ನು ಜಾತಿ ಜನಗಣತಿ ವಿಚಾರಕ್ಕೆ ಬರೋಣ. ವರದಿಯನ್ನು ನಾನೇ ಓದಿಲ್ಲ. ಅದು ಅವೈಜ್ಞಾನಿಕ ಎಂದು ಅಶೋಕ್ ಅವರು ಹೇಗೆ ಹೇಳುತ್ತಾರೆ ಎಂದು ಕೇಳಿದ್ದೀರಿ. ಸ್ವಾಮಿ ಸಿದ್ದರಾಮಯ್ಯನವರೇ, ತಾವೇ ನಿರ್ದೇಶನ ಕೊಟ್ಟು ಬರೆಸಿರುವ ವರದಿಯಲ್ಲಿ ಏನಿದೆ ಎಂಬುದು ತಮಗೆ ತಿಳಿದಿಲ್ಲ ಎಂದರೆ ಅದನ್ನು ನಂಬಲು ನಾವು ರಾಹುಲ್ ಗಾಂಧಿ ಅವರಷ್ಟು ಮೂರ್ಖರಲ್ಲ. ಅದು ಹೋಗಲಿ ಬಿಡಿ. ಸಾರ್ವಜನಿಕರು ಸೇರಿದಂತೆ ಅನೇಕರು ಜಾತಿಗಣತಿ ಸಮೀಕ್ಷೆ ನಡೆಸಲು ನಮ್ಮ ಮನೆಗೆ ಯಾರೂ ಬಂದಿಲ್ಲ ಎನ್ನುವ ದೂರುಗಳ ಆಧಾರದ ಮೇಲೆ ನಾನು ಇಡೀ ಪ್ರಕ್ರಿಯೆಯನ್ನು ಅವೈಜ್ಞಾನಿಕ ಎಂದಿದ್ದು. ಗಣತಿಯ ಪ್ರಕ್ರಿಯೆಯೇ ಅವೈಜ್ಞಾನಿಕ ಆಗಿರುವಾಗ ವರದಿಯಲ್ಲಿಯರುವ ಅಂಶಗಳು ಇನ್ನೆಷ್ಟು ಸರಿಯಾಗಿರಲು ಸಾಧ್ಯ?

8.) ಅದು ಹೋಗಲಿ ಬಿಡಿ. ವರದಿ ಅಂತಿಮವಾದಾಗ ತಾವು ಮುಖ್ಯಮಂತ್ರಿ ಆಗಿದ್ದಿರಿ. ನಂತರ ಸಮ್ಮಿಶ್ರ ಸರ್ಕಾರದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದಿರಿ. ಈಗ ಕಳೆದ 15 ತಿಂಗಳಿಂದ ಮುಖ್ಯಮಂತ್ರಿ ಆಗಿದ್ದೀರಿ. ಜಾತಿಗಣತಿಯ ಬಗ್ಗೆ ಇಷ್ಟು ವರ್ಷ ದಿನ ಇಲ್ಲದ ಕಾಳಜಿ ಈಗ ಹಠಾತ್ತನೆ ಬಂದಿದೆಯಲ್ಲ, ಅದನ್ನ ಸ್ವೀಕರಿಸಲು, ಓದಲು, ಸಂಪುಟದಲ್ಲಿ ಚರ್ಚಿಸಲು ಈಗ ಧಿಡೀರನೆ ಆಸಕ್ತಿ ಬಂದಿದೆಯಲ್ಲಾ, ಇದರ ಹಿಂದಿರುವ ಮಹದೋದ್ದೇಶ ಅರಿಯದಷ್ಟು ಅಮಾಯಕರಲ್ಲ ನಮ್ಮ ಕನ್ನಡಿಗರು.

ಈ ಪ್ರಶ್ನೆಗಳನ್ನ ಇತ್ತೀಚೆಗೆ ಜಾಗೃತವಾಗಿರುವ ತಮ್ಮ ಆತ್ಮಸಾಕ್ಷಿ ಬಳಿ ಒಮ್ಮೆ ಕೇಳಿ ನೋಡಿ. ಉತ್ತರ ಸಿಕ್ಕರೂ ಸಿಗಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಗೆದ್ದ ಬೆನ್ನಲ್ಲೇ ಒಮರ್ ಅಬ್ದುಲ್ಲಾ ದಿಡೀರ್ ಮೋದಿ ಹೊಗಳುತ್ತಿರುವುದಕ್ಕೆ ಕಾರಣವೇನು