Publish Date: Thu, 08 Jun 2023 (11:59 IST)
Updated Date: Thu, 08 Jun 2023 (11:01 IST)
ಹಾವೇರಿ : ಹೆಂಡತಿಯನ್ನು ಬರ್ಬರವಾಗಿ ಕೊಲೆ ಮಾಡಿದ ಪತಿ ತಾನೂ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾವೇರಿಯಲ್ಲಿ ನಡೆದಿದೆ. ಹಾವೇರಿ ತಾಲೂಕಿನ ಸಂಗೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ದ್ರಾಕ್ಷಾಣೆವ್ವ (45) ಎಂಬಾಕೆಯನ್ನು ಆಕೆಯ ಪತಿ ಪ್ರಭು ವಾರತಿ (52) ಎಂಬಾತ ಕೊಲೆ ಮಾಡಿ ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈತ ತನ್ನ ಹೆಂಡತಿಯ ಮೇಲೆ ಅನುಮಾನ ಪಡುತ್ತಿದ್ದ ಕಾರಣ ಪ್ರತಿದಿನ ಮನೆಯಲ್ಲಿ ಜಗಳ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಮಂಗಳವಾರ ಇದೇ ರೀತಿ ಜಗಳ ಆಡುತ್ತಿದ್ದ ಸಂದರ್ಭ ಇವರ ಜಗಳ ಅತಿರೇಕಕ್ಕೆ ಹೋಗಿ ಇಬ್ಬರ ನಡುವೆ ಹೊಡೆದಾಟ ಪ್ರಾರಂಭವಾಗಿದೆ.
ಈ ವೇಳೆ ಗಂಡ ಮಚ್ಚಿನಿಂದ ಹೆಂಡತಿಯನ್ನು ಹತ್ಯೆ ಮಾಡಿದ್ದು, ಬಳಿಕ ತಾನೂ ಮನೆಯ ಮುಂದೆ ನೇಣಿಗೆ ಶರಣಾಗಿದ್ದಾನೆ. ಸತಿ-ಪತಿಯ ಸಾವಿನಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಹಾವೇರಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಎಸ್ಪಿ ಶಿವಕುಮಾರ್ ಗುಣಾರೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.