Publish Date: Tue, 29 Aug 2023 (14:50 IST)
Updated Date: Tue, 29 Aug 2023 (15:25 IST)
ಕೋಲಾರ : ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಎರಡು ಮರ್ಯಾದಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್ ಮೂಲಕ ಆತಂಕ ಹೊರಹಾಕಿದ್ದಾರೆ.
ಕಳೆದ ಎರಡು ತಿಂಗಳ ಅವಧಿಯಲ್ಲಿ ಜಿಲ್ಲೆಯ 2 ಕಡೆಗಳಲ್ಲಿ ಮರ್ಯಾದೆಗೇಡು ಹತ್ಯೆಗಳು ನಡೆದಿವೆ.ಇದು ನಮ್ಮೆಲ್ಲರ ಮನ ಕಲುಕಿದೆ. ಸಮಾಜದಲ್ಲಿ ಅಂತರ್ಗತ ಜಾತಿ ವ್ಯವಸ್ಥೆ ಸಾಮಾಜಿಕ ಕಟ್ಟು ಪಾಡುಗಳ ಹೀನ ಮನಸ್ಥಿತಿ ಇಂತಹ ಘಟನೆಗಳು ಪ್ರತಿಫಲಿಸುತ್ತವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಪ್ರಕರಣಗಳಲ್ಲಿ ನಮ್ಮ ಸರ್ಕಾರ ಕಾನೂನಾತ್ಮಕ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಲಿದೆ ಎಂದು ಅವರು ಬರೆದುಕೊಂಡಿದ್ದಾರೆ.
ಪ್ರಕರಣದ ತನಿಖೆ ಹಾಗೂ ವಿಚಾರಣೆಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರವಹಿಸಲಾಗುತ್ತದೆ. ಜಾತಿಗ್ರಸ್ತ ಸಮಾಜದಲ್ಲಿ ಪರಿವರ್ತನೆ, ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಮನುಷ್ಯ ಚಂದ್ರನ ಮೇಲೆ ಕಾಲಿರಿಸಿದ್ದರು ದಲಿತರಿಗೆ ದೇವಸ್ಥಾನ, ಮನೆಗಳಲ್ಲಿ ಕಾಲಿರಿಸಲು ಅವಕಾಶ ನೀಡದ ಆಚರಣೆ, ಸಂಪ್ರದಾಯ ನಮ್ಮಲ್ಲಿವೆ ಎಂದು ಅವರು ಬೇಸರ ಹೊರಹಾಕಿದ್ದಾರೆ.