ದಾವಣಗೆರೆ: ಬೆಳಗಾವಿಯಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಗೋಲಿಬಾರ್ ಮಾಡಲು ಸಂಚು ಮಾಡಲಾಗಿತ್ತು. ಈ ಮೂಲಕ ಸ್ವಾಮೀಜಿಯನ್ನು ಮುಗಿಸಲು ಪ್ಲ್ಯಾನ್ ನಡೆದಿತ್ತು ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಗಂಭೀರ ಆರೋಪ ಮಾಡಿದ್ದಾರೆ.
ಈ ವಿಚಾರವಾಗಿ ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಚನ್ನಮ್ಮ ವಂಶಸ್ಥರ ಮೇಲೆ ನಡೆದ ಲಾಠಿ ಚಾರ್ಜ್‍ನ್ನು ಖಂಡಿಸಬೇಕು. ಇಲ್ಲವಾದಲ್ಲಿ ನಮಗೂ ಕೂಡ ಉಳಿಗಾಲವಿಲ್ಲದಂತಾಗುತ್ತದೆ . ನಾವು ಪಂಚಮಸಾಲಿ ಸಮುದಾಯದ ಜತೆಗೆ ಯಾವಾಗಲೂ ಇದ್ದೇವೆ. ಇವರ ಮೇಲಿನ ದಾಳಿಯನ್ನು ಎಲ್ಲ ಮಠಾಧೀಶರು ಖಂಡಿಸಬೇಕೆಂದರು.
ಇನ್ನೂ ಲಾಠಿ ಚಾರ್ಜ್ ವಿಚಾರವಾಗಿ ಹಗುರವಾಗಿ ಮಾತನಾಡಿದ ಗೃಹಮಂತ್ರಿ ಜಿ ಪರಮೇಶ್ವರ್ ಅವರನ್ನು ಸಂಪುಟದಿಂದ ವಜಾ ಮಾಡುವಂತೆ ಒತ್ತಾಯ ಮಾಡಿದರು.
ಆರ್‍ಎಸ್‍ಎಸ್‍ನವರು ಹೋರಾಟದಲ್ಲಿ ಕಲ್ಲು ತೂರಿದ್ದಾರೆ ಎಂಬ ಖಾಶಪ್ಪನವರ ಹೇಳಿಕೆ ವಿಚಾರವಾಗಿ, ಹೋರಾಟ ಹತ್ತಿಕ್ಕಲು ಅವರೇ ಕಲ್ಲು ತೂರಿರಬಹುದು. ಅಧಿಕಾರದ ಪಿತ್ತ ನೆತ್ತಿಗೇರಿ ಈ ರೀತಿ ಮಾತನಾಡುತಿದ್ದಾರೆ. ನಮ್ಮ ಸರ್ಕಾರ ಇರುವ ಸಮಯದಲ್ಲಿ ಒಂದು ಕೂಡ ಅಹಿತಕರ ಘಟನೆ ನಡೆಯಲಿಲ್ಲ. ನೀವು ಈ ರೀತಿ ಮಾತನಾಡೋದು ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಸ್ಲಿಂ ಸಮುದಾಯದ ಮೇಲೆ ವ್ಯಾಮೋಹ ಜಾಸ್ತಿಯಾಗಿದ್ದು, ಕಾವಿ ಬಟ್ಟೆ ಹಾಕುವವರ ಮೇಲೆ ಯಾಕಿಷ್ಟು ಕೋಪ ಎಂದು ಪ್ರಶ್ನಿಸಿದರು.