ಬೆಂಗಳೂರು: ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳ ಭರವಸೆಯ ಮೂಲಕವೇ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರಕ್ಕೆ ಈಗ ಅದುವೇ ಹೊರೆಯಾಗುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಗೃಹಸಚಿವ ಜಿ ಪರಮೇಶ್ವರ್ ಹೇಳಿಕೆ ನೀಡಿದ್ದು ಎಲ್ಲರಿಗೂ ಅಲ್ಲ, ಕೇವಲ ಬಡವರಿಗೆ ಮಾತ್ರ ಗ್ಯಾರಂಟಿ ಯೋಜನೆ ಸಿಗುವಂತಾಗಬೇಕು ಎಂದಿದ್ದಾರೆ.
ಇತ್ತೀಚೆಗಿನ ದಿನಗಳಲ್ಲಿ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕೆಲಸಗಳಿಗೆ, ಶಾಸಕರ ಅನುದಾನಕ್ಕೆ ಕತ್ತರಿ ಬಿದ್ದಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ಆಡಳಿತ ಪಕ್ಷದ ನಾಯಕರೊಳಗೇ ಅಸಮಾಧಾನವಿದೆ.
ಇದರ ನಡುವೆ ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಯ ಹಣ ಸರಿಯಾಗಿ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಗ್ಯಾರಂಟಿಗಳಿಗೆ ಹಣ ಹೊಂದಿಸಲು ಬೆಲೆ ಏರಿಕೆ ಮಾಡಲಾಗುತ್ತಿದೆ ಎಂಬ ಆಪಾದನೆಗಳಿವೆ. ಈ ನಡುವೆ ಪರಮೇಶ್ವರ್ ಈ ಹೇಳಿಕೆ ನೀಡಿದ್ದಾರೆ.
ಬಿಪಿಎಲ್ ಕಾರ್ಡ್ ಮಾನದಂಡವಾಗಿಟ್ಟುಕೊಂಡು ಬಡವರಿಗೆ ಮಾತ್ರ ಗ್ಯಾರಂಟಿ ಯೋಜನೆಗಳು ಸಿಗುವಂತಾಗಬೇಕು. ಗ್ಯಾರಂಟಿ ಯೋಜನೆಗಳ ಪುನರ್ ಪರಿಶೀಲಿಸಲು ಸರ್ಕಾರದ ಹಂತದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ. ಶ್ರೀಮಂತರು ಫ್ರೀ ಯೋಜನೆಯ ಲಾಭ ಪಡೆದುಕೊಳ್ಳುತ್ತಿದ್ದಾರೆ. ಇದರ ಬದಲು ಬಡವರಿಗೆ ಯೋಜನೆಯ ಲಾಭ ಸಿಗುವಂತಾಗಲು ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದ್ದಾರೆ.