ಬೆಂಗಳೂರು: ಕನ್ನಡದಲ್ಲಿ ಆರ್ಡರ್ ಹೇಳಿದ್ದಕ್ಕೆ ಹಿಂದಿ ಭಾಷಿಕ ಅಂಗಡಿ ಮಾಲಿಕ ಡೆಲಿವರಿ ಬಾಯ್ ಗೆ ಹಿಗ್ಗಾಮುಗ್ಗಾ ಥಳಿಸಿದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದು ನಡೆದಿರುವುದು ಎಲ್ಲೋ ಹೊರ ರಾಜ್ಯದಲ್ಲಿ ಅಲ್ಲ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ. ಇತ್ತೀಚೆಗೆ ಬೆಂಗಳೂರಿನಲ್ಲಿ ಪರಭಾಷಿಕರ ಹಾವಳಿ ಜೋರಾಗುತ್ತಿದ್ದು, ಅದಕ್ಕೆ ಈ ಘಟನೆ ಕೂಡಾ ಇನ್ನೊಂದು ಸೇರ್ಪಡೆ ಎನ್ನಬಹುದು.
ಕರ್ನಾಟಕದಲ್ಲೇ ಇದ್ದುಕೊಂಡು ಇಲ್ಲಿಯೇ ಕೆಲಸ ಮಾಡಿಕೊಂಡು ಇಲ್ಲಿನ ಭಾಷೆ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಬಾಯಿಗೆ ಬಂದ ಹಾಗೆ ಮಾತನಾಡುವ ಅನೇಕರು ಈಗಾಗಲೇ ತಕ್ಕ ಪಾಠ ಕಲಿತಿದ್ದಾರೆ. ಇದೀಗ ಅಂತಹದ್ದೇ ಮತ್ತೊಂದು ಘಟನೆ ನಡೆದಿದೆ.
ಡೆಲಿವರಿ ಬಾಯ್ ಒಬ್ಬ ಅಂಗಡಿಗೆ ಬಂದು ತನ್ನ ಆರ್ಡರ್ ಹೇಳುತ್ತಾನೆ. ಮೊದಲಿಗೆ ಆತನ ಜೊತೆ ಕೇವಲ ವಾಗ್ವಾದ ನಡೆಸುವ ಮಾಲಿಕ ಕೊನೆಗೆ ಹಿಗ್ಗಾ ಮುಗ್ಗಾ ಥಳಿಸುತ್ತಾನೆ. ಆಗ ಅಲ್ಲಿದ್ದ ಬೇರೆಯವರು ಆತನನ್ನು ತಡೆಯಲು ಹೋಗುತ್ತಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.