ಬೆಂಗಳೂರು: ಸರ್ಕಾರೀ ಪ್ರೌಢ ಶಾಲೆಯಲ್ಲಿ ಹಿಂದಿ ಭಾಷೆಗೆ ನಿಧಾನವಾಗಿ ಕೊಕ್ ಕೊಡಲು ರಾಜ್ಯ ಸರ್ಕಾರ ತಯಾರಿ ನಡೆಸಿರುವುದು ಹಿಂದಿ ಶಿಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಶಾಲೆಗಳಲ್ಲಿ ತೃತೀಯ ಭಾಷೆಯಾಗಿ ಹಿಂದಿ ಬೋಧನೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಹಲವು ಹಿಂದಿ ಶಿಕ್ಷಕರೂ ಇದ್ದಾರೆ. ಆದರೆ ಈಗ ರಾಜ್ಯ ಸರ್ಕಾರ ಸದ್ದಿಲ್ಲದೇ ಹಿಂದಿ ಭಾಷೆಯನ್ನು ಕಡೆಗಣಿಸಲು ತಯಾರಿ ನಡೆಸಿರುವುದು ಹಿಂದಿ ಶಿಕ್ಷಕರ ಕೆಂಗಣ್ಣಿಗೆ ಗುರಿಯಾಗಿದೆ.
9,10 ನೇ ತರಗತಿಯಲ್ಲಿ ಹಿಂದಿ ಐಚ್ಛಿಕ ಭಾಷೆಯಾಗಿ ಕಲಿಸಲು ಸರ್ಕಾರ ಮುಂದಾಗಿದೆ. ಹಿಂದಿ ಅಥವಾ ಕೌಶಲ್ಯ ವಿಷಯವನ್ನು ನೀಡಲಾಗುತ್ತಿದೆ. ಅದರಲ್ಲೂ ಕೌಶಲ್ಯ ವಿಷಯವನ್ನೇ ಆಯ್ಕೆ ಮಾಡುವಂತೆ ಮುಖ್ಯೋಪಾಧ್ಯಯರಿಗೂ ಒತ್ತಡ ಬರುತ್ತಿದೆ ಎನ್ನಲಾಗಿದೆ.
ಈ ಮೂಲಕ ನಿಧಾನವಾಗಿ ಹಿಂದಿಯನ್ನು ನಿವಾರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂಬುದು ಹಿಂದಿ ಶಿಕ್ಷಕರ ಆರೋಪವಾಗಿದೆ. ಈಗಾಗಲೇ ರಾಜ್ಯದಾದ್ಯಂತ 375 ಸರ್ಕಾರಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ 306 ಸರ್ಕಾರಿ ಶಾಲೆಗಳಲ್ಲಿ ಹಿಂದಿ ಬದಲು ಕೌಶಲ್ಯ ವಿಷಯ ಸೇರ್ಪಡೆಗೊಳಿಸಲು ಹೆಜ್ಜೆಯಿಡಲಾಗಿದೆ. ಕಲಬುರಗಿ ಜಿಲ್ಲೆಯಲ್ಲೇ 81 ಪ್ರೌಢ ಶಾಲೆಗಳಲ್ಲಿ ಇದು ಜಾರಿಗೆ ಬಂದಿದೆ.