Publish Date: Fri, 18 Oct 2024 (11:16 IST)
Updated Date: Fri, 18 Oct 2024 (11:18 IST)
ಬೆಂಗಳೂರು: ಖಾಸಗಿ ಶಾಲೆಯ ಮಕ್ಕಳು ಸಾವಿರಾರು ರೂ. ಫೀಸ್ ಕೊಟ್ಟು ಶಾಲೆಗೆ ಹೋಗುವುದಲ್ಲದೆ, ದುಬಾರಿ ಶುಲ್ಕ ಕೊಟ್ಟು ಮಕ್ಕಳನ್ನು ಟ್ಯೂಷನ್ ಗೂ ಕಳುಹಿಸ್ತಾರೆ. ಆದರೆ ಸರ್ಕಾರೀ ಶಾಲೆಯ ಬಡ ಮಕ್ಕಳಿಗೆ ಈ ಸೌಕರ್ಯವಿಲ್ಲ. ಆದರೆ ಇದಕ್ಕೀಗ ಸರ್ಕಾರವೇ ಪರಿಹಾರ ಕೊಡಿಸಲಿದೆ.
ಇನ್ನು ಮುಂದೆ ಸರ್ಕಾರೀ ಶಾಲೆಯ ಮಕ್ಕಳಿಗೂ ಟ್ಯೂಷನ್ ಒದಗಿಸಲು ಕರ್ನಾಟಕ ಶಿಕ್ಷಣ ಇಲಾಖೆ ತೀರ್ಮಾನಿಸಿದೆ. ಸರ್ಕಾರೀ ಶಾಲೆಯ ಮಕ್ಕಳಿಗೆ ಗಣಿತ, ವಿಜ್ಞಾನ ಕಬ್ಬಿಣದ ಕಡಲೆಯಾಗುತ್ತಿದೆ. ಹೀಗಾಗಿ ಕೆಲವೊಂದು ಭಾಗಗಳಲ್ಲಿ ಮಕ್ಕಳು ಕಡಿಮೆ ಅಂಕ ಪಡೆಯುತ್ತಿದ್ದಾರೆ. ಇದನ್ನು ತಪ್ಪಿಸಲು ಶಿಕ್ಷಣ ಇಲಾಖೆ ಟ್ಯೂಷನ್ ಕಲ್ಪಿಸಲು ಮುಂದಾಗಿದೆ.
ಪ್ರತಿನಿತ್ಯ ಶಾಲೆ ಆರಂಭಕ್ಕೆ ಮುನ್ನ ಮತ್ತು ನಂತರ ಒಂದು ಗಂಟೆ ಟ್ಯೂಷನ್ ನಡೆಯಲಿದೆ. 1 ನೇ ತರಗತಿಂದ 12 ನೇ ತರಗತಿಯವರೆಗಿನ ಮಕ್ಕಳಿಗೆ ಟ್ಯೂಷನ್ ನೀಡಲಾಗುತ್ತದೆ. ಯಾವ ತರಗತಿಯಲ್ಲಿ ಯಾವ ಮಕ್ಕಳೆಲ್ಲಾ ಯಾವ ವಿಷಯದಲ್ಲಿ ಹಿನ್ನಡೆಯಲ್ಲಿದ್ದಾರೆ ಎಂದು ಆಯಾ ತರಗತಿಯ ಶಿಕ್ಷಕರೇ ನಿರ್ಧರಿಸಿ ಟ್ಯೂಷನ್ ನೀಡುತ್ತಾರೆ.
ಬಡ ಮಕ್ಕಳಿಗೆ ಉಚಿತ ಶಿಕ್ಷಣದ ಜೊತೆಗೆ ಉಚಿತ ಟ್ಯೂಷನ್ ನೀಡುವ ಮೂಲಕ ಅವರನ್ನು ಮುಂದೆ ತರುವುದು ಇಲಾಖೆಯ ಉದ್ದೇಶವಾಗಿದೆ. ಆದರೆ ಸದ್ಯಕ್ಕೆ ಇದು ಇನ್ನೂ ಜಾರಿಗೆ ಬಂದಿಲ್ಲ. ಕೇವಲ ಘೋಷಣೆಯಾಗದೇ ಇದು ಪರಿಣಾಮಕಾರಿಯಾಗಿ ಜಾರಿಗೆ ಬರಲಿ ಎಂಬುದೇ ಎಲ್ಲರ ಆಶಯ.