ವಾಷಿಂಗ್ಟನ್: ಅಮೆರಿಕಾದ ನೂತನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ವೇಳೆ ಭಾರತೀಯ ಉದ್ಯಮಿ ದಂಪತಿ ಮುಕೇಶ್ ಅಂಬಾನಿ-ನೀತಾ ಅಂಬಾನಿ ಕೂಡಾ ಭಾಗಿಯಾಗಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದರೊಂದಿಗೆ ಅಮೆರಿಕಾದಲ್ಲಿ ಡೊನಾಲ್ಡ್ ಟ್ರಂಪ್ 2.0 ಯುಗ ಆರಂಭವಾಗಿದೆ. ಮೊದಲ ಭಾಷಣದಲ್ಲೇ ಟ್ರಂಪ್ ಅಗ್ರೆಸಿವ್ ಆಗಿ ಮಾತನಾಡಿದ್ದು ಇಂದಿನಿಂದ ಅಮೆರಿಕಾದ ಸುವರ್ಣ ಯುಗ ಆರಂಭವಾಗಲಿದೆ ಎಂದಿದ್ದಾರೆ. ವಿಶೇಷವೆಂದರೆ ಟ್ರಂಪ್ ಸರ್ಕಾರದಲ್ಲಿ ಭಾರತದ ಅಳಿಯ ಜೆಡಿ ವ್ಯಾನ್ಸ್ ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇವರು ಆಂಧ್ರ ಮೂಲದ ಉಷಾ ಅವರ ಪತಿ.
ಟ್ರಂಪ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಅನೇಕ ಗಣ್ಯಾತಿ ಗಣ್ಯರು ಭಾಗಿಯಾಗಿದ್ದಾರೆ. ಇದರಲ್ಲಿ ಮುಕೇಶ್ ಅಂಬಾನಿ ದಂಪತಿ ಕೂಡಾ ಸೇರಿದ್ದಾರೆ. ವಿಶ್ವದ ಘಟಾನುಘಟಿ ಉದ್ಯಮಿಗಳ ಸಾಲಿನಲ್ಲಿ ಭಾರತೀಯ ಉದ್ಯಮ ದಂಪತಿಯೂ ಪಾಲ್ಗೊಂಡಿದ್ದಾರೆ.
ಡೊನಾಲ್ಡ್ ಟ್ರಂಪ್ ಅಧ್ಯಕ್ಷೀಯ ಪದಗ್ರಹಣ ಸಮಾರಂಭಕ್ಕೆ ಕೆಲವೇ ಕೆಲವು ಸೀಮಿತ ಗಣ್ಯರನ್ನು ಮಾತ್ರ ಆಹ್ವಾನಿಸಲಾಗಿತ್ತು. ಅವರಲ್ಲಿ ಅಂಬಾನಿ ದಂಪತಿ ಕೂಡಾ ಸೇರಿದ್ದರು. ಇದಕ್ಕೆ ಮೊದಲು ಟ್ರಂಪ್ ಪಾರ್ಟಿಯಲ್ಲೂ ಅಂಬಾನಿ ದಂಪತಿ ಪಾಲ್ಗೊಂಡಿದ್ದರು.