ಮುಂಬೈ: ರಿಲಯನ್ಸ್ ಸಮೂಹದ ಒಡೆಯ, ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿಗೆ ಇಂದು ಜನ್ಮದಿನದ ಸಂಭ್ರಮ. ಅಂಬಾನಿ ಇಂದು 67 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ.
1957 ರಲ್ಲಿ ಧೀರೂಭಾಯಿ ಅಂಬಾನಿ-ಕೋಕಿಲಾ ಬೆನ್ ದಂಪತಿಯ ಮಗನಾಗಿ ಮುಕೇಶ್ ಜನಿಸುತ್ತಾರೆ. ಅವರು ಹುಟ್ಟಿನಿಂದಲೇ ಅಗರ್ಭ ಶ್ರೀಮಂತಿಕೆಯಲ್ಲೇ ಬೆಳೆದವರಲ್ಲ. ಯೆಮನ್ ನಲ್ಲಿದ್ದ ತಂದೆ ಧೀರೂಭಾಯಿ ಉದ್ದಿಮೆ ಆರಂಭಿಸುವುದಕ್ಕಾಗಿ ಕುಟುಂಬ ಸಮೇತ ಭಾರತಕ್ಕೆ ಬರುತ್ತಾರೆ.
1970 ರ ದಶಕದಲ್ಲಿ ಮುಕೇಶ್ ಸಾಮಾನ್ಯರಂತೇ ಜೀವನ ನಡೆಸಿದ್ದರು. ಧೀರೂಭಾಯಿ ಅಂಬಾನಿಯವರು ಮುಂಬೈನಲ್ಲಿ ಎರಡು ಬೆಡ್ ರೂಂಗಳ ಮನೆ ಮಾಡಿದ್ದರು. ಈ ವೇಳೆ ಎಲ್ಲರಂತೇ ಮುಕೇಶ್ ಅಂಬಾನಿ ಕೂಡಾ ಬಸ್ ನಲ್ಲೇ ಓಡಾಡುತ್ತಿದ್ದರು. ವ್ಯಾಪಾರ ಕುದುರಿದ ಮೇಲೆ ಧೀರೂಭಾಯಿ ಅಂಬಾನಿ 14 ಮಹಡಿಯ ಅಪಾರ್ಟ್ ಮೆಂಟ್ ಬ್ಲಾಕ್ ಖರೀದಿಸಿದರು. ವಿಶೇಷವೆಂದರೆ ತಂದೆಯ ಮೇಲಿನ ಪ್ರೀತಿಗೆ ಮುಕೇಶ್ ಅಂಬಾನಿ ಮತ್ತು ಅವರ ಸಹೋದರ ಅನಿಲ್ ಅಂಬಾನಿ ತೀರಾ ಇತ್ತೀಚೆಗಿನವರೆಗೂ ಅದೇ ಅಪಾರ್ಟ್ ಮೆಂಟ್ ನ ಬೇರೆ ಬೇರೆ ಮಹಡಿಯಲ್ಲಿ ವಾಸವಿದ್ದರು.
ತಮ್ಮ ಎಂಬಿಎ ಪದವಿಯನ್ನು ಅರ್ಧಕ್ಕೇ ನಿಲ್ಲಿಸಿ 1980 ರಲ್ಲಿ ತಂದೆಗೆ ಸಹಾಯವಾಗಲು ರಿಲಯನ್ಸ್ ಉದ್ಯಮದಲ್ಲಿ ತೊಡಗಿಸಿಕೊಂಡರು. ಬಳಿಕ ರಿಲಯನ್ಸ್ ಉದ್ಯಮ ಎರಡು ಭಾಗವಾಯಿತು. ಒಂದು ಭಾಗ ಅನಿಲ್ ಅಂಬಾನಿ ಮತ್ತು ಮತ್ತೊಂದು ಭಾಗ ಮುಕೇಶ್ ಅಂಬಾನಿ ಪಾಲಾಯಿತು. ಮುಕೇಶ್ ಅಂಬಾನಿ ಈಗ ತಮ್ಮ ರಿಲಯನ್ಸ್ ಉದ್ಯಮವನ್ನು ಜಾಗತಿಕ ಮಟ್ಟದಲ್ಲಿ ಬೆಳೆಸಿದ್ದು, ವಿಶ್ವದ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಅಗ್ರ ಸಾಲಿನಲ್ಲಿದ್ದಾರೆ. ಅವರು ವಾಸ್ತವ್ಯವಿರುವ ಮುಂಬೈನ ಆಂಟಿಲ್ಲಾ ನಿವಾಸ ವಿಶ್ವದ ಅತೀ ದುಬಾರಿ ಮನೆಗಳಲ್ಲಿ ಒಂದಾಗಿದೆ. ಈ ಆಧುನಿಕ ಕುಬೇರನಿಗೆ ಇಂದು ಹ್ಯಾಪೀ ಬರ್ತ್ ಡೇ.