ಬೆಂಗಳೂರು: ಇಂಧನ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಕರ್ನಾಟಕ ಹೈಕೋರ್ಟ್‌ನಿಂದ ಬಿಗ್ ರಿಲೀಫ್ ದೊರಕಿದೆ. ಸ್ಮಾರ್ಟ್ ಮೀಟರ್ ಟೆಂಡರ್ ಹಗರಣ ಆರೋಪಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ದಾಖಲಾಗಿದ್ದ ಖಾಸಗಿ ದೂರುಗಳನ್ನು ಹೈಕೋರ್ಟ್ ರದ್ದುಪಡಿಸಿದೆ.
ರಾಜ್ಯದಲ್ಲಿ ಸ್ಮಾರ್ಟ್ ವಿದ್ಯುತ್ ಮೀಟರ್‌ಗಳ ಖರೀದಿ ಮತ್ತು ಅಳವಡಿಕೆ ಟೆಂಡರ್‌ನಲ್ಲಿ ಅಕ್ರಮ ನಡೆಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಜಾರ್ಜ್ ಅವರ ಜೊತೆಗೆ ಇಂಧನ ಇಲಾಖೆಯ ಗೌರವ್ ಗುಪ್ತ, ಬೆಸ್ಕಾಂನ ಮಹಾಂತೇಶ ಬೀಳಗಿ ಹಾಗೂ ಹೆಚ್.ಜೆ. ರಮೇಶ್ ವಿರುದ್ಧದ ಪ್ರಕರಣಗಳನ್ನೂ ಹೈಕೋರ್ಟ್ ರದ್ದುಪಡಿಸಿದೆ. ಈ ಪ್ರಕರಣದಲ್ಲಿ ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ಹೈಕೋರ್ಟ್ ಪೀಠವು ಸಚಿವ ಕೆ.ಜೆ.ಜಾರ್ಜ್ ವಿರುದ್ಧದ ಖಾಸಗಿ ದೂರನ್ನು ರದ್ದುಪಡಿಸಿದೆ.
ಇದರಿಂದ ಅಕ್ರಮದ ಆರೋಪ ಹೊರಿಸಿ ಖಾಸಗಿ ದೂರು ದಾಖಲಿಸಿದ್ದ ಬಿಜೆಪಿ ಮುಖಂಡರಾದ ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಎಸ್.ಆರ್. ವಿಶ್ವನಾಥ್ ಮತ್ತು ಧೀರಜ್ ಮುನಿರಾಜು ಅವರಿಗೆ ಹಿನ್ನಡೆಯಾಗಿದೆ.
ಬಿಜೆಪಿ ಮುಖಂಡರು ದಾಖಲಿಸಿದ್ದ ಖಾಸಗಿ ದೂರು ರದ್ದು ಕೋರಿ ಹಾಗೂ ಆ ದೂರು ದಾಖಲಿಸಿಕೊಂಡು, ಟೆಂಡರ್ ಅಕ್ರಮಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸಲು ಲೋಕಾಯುಕ್ತ ಪೊಲೀಸರಿಗೆ ನಿರ್ದೇಶಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೊರಡಿಸಿದ್ದ ಆದೇಶ ರದ್ದು ಕೋರಿ ಸಚಿವ ಕೆ.ಜೆ ಜಾರ್ಜ್ ಹಾಗೂ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ, ತಾಂತ್ರಿಕ ವಿಭಾಗದ ನಿರ್ದೇಶಕ ಎಚ್.ಜೆ. ರಮೇಶ್ ಹೈಕೋರ್ಟ್ ಮೆಟ್ಟಿಲೇರಿದ್ದರು.