Publish Date: Mon, 26 Nov 2018 (18:21 IST)
Updated Date: Mon, 26 Nov 2018 (18:25 IST)
ಬೆಂಕಿ ಹಚ್ಚಿಕೊಂಡು ಮಹಿಳೆಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮಹಿಳೆಯ ಅಂತ್ಯ ಸಂಸ್ಕಾರದ ವೇಳೆ ಮೃತಳ ಸಂಬಂಧಿಕರು ಮಾಡಿದ್ದನ್ನು ನೋಡಿದರೆ ಶಾಕ್ ಆಗ್ತೀರಾ….
ಆತ್ಮಹತ್ಯೆ ಮಾಡಿಕೊಂಡ ಗೃಹಿಣಿಯ ಅಂತ್ಯ ಸಂಸ್ಕಾರದ ವೇಳೆಯಲ್ಲಿಯೇ ಮೃತಳ ಪತಿಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಮೃತ ಮಹಿಳೆಯ ಪೋಷಕರು ಹಾಗೂ ಸಂಬಂಧಿಕರಿಂದ ಕೃತ್ಯ ನಡೆದಿದೆ.
ವಿಜಯಪುರ ತಾಲೂಕಿನ ಖಿಲಾರಹಟ್ಟಿ ಗ್ರಾಮದ ಸ್ಮಶಾನದಲ್ಲಿ ರಾತ್ರಿ ಘಟನೆ ನಡೆದಿದೆ. ಮಹಾರಾಷ್ಟ್ರದ ಸಿಂದದುರ್ಗ ಜಿಲ್ಲೆಗೆ ಗುಳೆ ಹೋಗಿದ್ದ ಕುಟುಂಬದಲ್ಲಿ ಗೃಹಿಣಿ ಕಾಜಲ್ ತಾಂಬೆ (20) ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು.
ರಾತ್ರಿ ಕಾಜಲ್ ಶವ ಅಂತ್ಯ ಸಂಸ್ಕಾರಕ್ಕೆ ಖಿಲಾರಹಟ್ಟಿಗೆ ತರಲಾಗಿತ್ತು. ಅಂತ್ಯ ಸಂಸ್ಕಾರದ ವೇಳೆ ಕಾಜಲ್ ಪೋಷಕರು ಹಾಗೂ ಸಂಬಂಧಿಕರಿಂದ ಪತಿ ರಾಜುನನ್ನು ಕೊಲೆ ಮಾಡಲಾಗಿದೆ. ಅಂತ್ಯ ಸಂಸ್ಕಾರಕ್ಕೆ ತಂದಿದ್ದ ಕಟ್ಟಿಗೆ ಹಾಗೂ ಕಲ್ಲುಗಳಿಂದ ಜಜ್ಜಿ ಕೊಲೆ ಮಾಡಲಾಗಿದೆ. ರಾಜು ತಾಂಬೆ (23) ಕೊಲೆಯಾದ ವ್ಯಕ್ತಿಯಾಗಿದ್ದಾನೆ.
ರಾಜು ಕಿರುಕುಳದಿಂದಲೇ ಕಾಜಲ್ ಬೆಂಕಿ ಹಚ್ಚಿಕೊಂಡಿರುವ ಆರೋಪ ಕೇಳಿಬಂದಿದೆ. ಹಲ್ಲೆ ತಡೆಯಲು ಬಂದಿದ್ದ ರಾಜೂ ಸಹೋದರ ಸಂಜಯ ಮೇಲೂ ಹಲ್ಲೆ ನಡೆದಿದೆ. ತೀವ್ರಗಾಯಗೊಂಡ ಸಂಜಯ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ರಾಜು ಕೊಲೆಯ ಮಧ್ಯೆಯೇ ತರಾತುರಿಯಲ್ಲಿ ತಡರಾತ್ರಿ ಕಾಜಲ್ ಅಂತ್ಯ ಸಂಸ್ಕಾರ ನಡೆದಿದೆ. ಸಧ್ಯ ಪರಾರಿಯಾಗಿರುವ ರಾಜು ಕೊಲೆ ಮಾಡಿರುವ ಆರೋಪಿಗಳನ್ನು ಬಬಲೇಶ್ವರ ಪೊಲೀಸ್ ಠಾಣೆಯ ಪೊಲೀಸರು ಬಂಧನಕ್ಕೆ ಬಲೆ ಬೀಸಿದ್ದಾರೆ.