ಚಿಕ್ಕಮಗಳೂರು : ಕಾಲು ಕೆಸರಾಗಿದೆ ಎಂದು ಕಾಲು ತೊಳೆದುಕೊಳ್ಳಲು ಹಳ್ಳಕ್ಕೆ ಇಳಿದಿದ್ದ 1ನೇ ತರಗತಿಯ ಬಾಲಕಿ ಹಳ್ಳದಲ್ಲಿ ಕೊಚ್ಚಿ ಹೋದ ಘಟನೆ ತಾಲೂಕಿನ ಹೊಸಪೇಟೆ ಗ್ರಾಮದಲ್ಲಿ ನಡೆದಿದೆ.
ಹಳ್ಳದಲ್ಲಿ ಕೊಚ್ಚಿ ಹೋದ ಬಾಲಕಿಯನ್ನು ಸುಪ್ರಿತಾ(6) ಎಂದು ಗುರುತಿಸಲಾಗಿದೆ. ಸುಪ್ರಿತಾ ತನ್ನ ಅಣ್ಣನ ಜೊತೆ ಶಾಲೆ ಮುಗಿಸಿಕೊಂಡು ಮನೆಗೆ ಬರುತ್ತಿದ್ದಾಗ ಕಾಲು ಕೆಸರಾಯಿತು ಎಂದು ಅಣ್ಣ-ತಂಗಿ ಇಬ್ಬರೂ ಹಳ್ಳದಲ್ಲಿ ಕಾಲು ತೊಳೆದುಕೊಳ್ಳಲು ಹೋಗಿದ್ದರು. ಆ ವೇಳೆ ಸುಪ್ರಿತಾ ನೀರಲ್ಲಿ ಕೊಚ್ಚಿ ಹೋಗಿದ್ದಾಳೆ.
ಕಳೆದೊಂದು ವಾರದಿಂದ ಆರೋಗ್ಯ ಸರಿ ಇಲ್ಲ ಎಂದು ಶಾಲೆಗೆ ಹೋಗಿರದ ಬಾಲಕಿ ಸೋಮವಾರ ಶಾಲೆಗೆ ಹೋಗಿದ್ದಳು. ಆದರೆ, ಸಂಜೆ ಮನೆಗೆ ಬರುವಾಗ ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆ.
ವಿಷಯ ತಿಳಿದ ಕೂಡಲೇ ಸ್ಥಳೀಯರು ಬಾಲಕಿಯನ್ನು ಹುಡುಕುವ ಪ್ರಯತ್ನ ಮಾಡಿದ್ದಾರೆ. ಆದರೆ, ಬಾಲಕಿ ಪತ್ತೆಯಾಗಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಭೇಟಿ ನೀಡಿದ್ದರು. ಸ್ಥಳೀಯರು ಜೊತೆ ಅಧಿಕಾರಿಗಳು ಕೂಡ ನೀರಿನಲ್ಲಿ ಧುಮುಕಿ ಹರಿಯುವ ಹಳ್ಳದಲ್ಲಿ ಬಾಲಕಿಯನ್ನು ಹುಡುಕುವ ಪ್ರಯತ್ನ ಮಾಡಿದ್ದರು. ಆದರೂ ಬಾಲಕಿ ಪತ್ತೆಯಾಗಲಿಲ್ಲ.
ಅಗ್ನಿ ಶಾಮಕ ಸಿಬ್ಬಂದಿ ಬಳಿಕ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ವೇಗವಾಗಿ ಹರಿಯುವ ಹಳ್ಳದಲ್ಲಿ ಇಳಿದು ಬಾಲಕಿಗಾಗಿ ಹುಡುಕಾಡಿದರೂ ಆಕೆ ಪತ್ತೆಯಾಗಿಲ್ಲ.