ಬೆಂಗಳೂರು: ರಾಜ್ಯದ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ರಾಜ್ಯದ ಮೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಶಿವಮೊಗ್ಗ, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಕರಾವಳಿ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಗಾಳಿಯ ವೇಗ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಬೀಸಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯಬ್ಬರ ಮುಂದುವರಿದಿದೆ. ಪಶ್ಚಿಮ ಘಟ್ಟ ಭಾಗದ ಹೆದ್ದಾರಿ ಭಾಗದಲ್ಲಿ ಭೂಕುಸಿತ ಉಂಟಾಗಿದೆ. ಸದ್ಯ ಜಿಲ್ಲಾಡಳಿತ ಹೆದ್ದಾರಿಯಲ್ಲಿ ಲಘು ವಾಹನಗಳಿಗೆ ಮಾತ್ರ ಅವಕಾಶ ಮಾಡಿಕೊಟ್ಟಿದೆ.
ಕಾಫಿನಾಡ ಮಲೆನಾಡಲ್ಲಿ ರಣ ಗಾಳಿ-ಮಳೆ ಮುಂದುವರಿದಿದ್ದು, ನಿರಂತರ ಧಾರಾಕಾರ ಮಳೆಗೆ ಶೃಂಗೇರಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಶೃಂಗೇರಿ ಜನಸಾಮಾನ್ಯರ ಜೊತೆ ಶಾರದಾಂಬೆ ಭಕ್ತರು ಕೂಡ ಕಂಗಾಲಾಗಿದ್ದಾರೆ. ತುಂಗಾ ನದಿಯ ಅಬ್ಬರಕ್ಕೆ ಪ್ರವಾಸಿಗರ ಕಾರುಗಳು ಮುಳುಗಡೆಯಾಗಿದೆ. ಗಾಂಧಿ ಮೈದಾನದಲ್ಲಿ ನಿಂತಿದ್ದ ಪ್ರವಾಸಿ ಕಾರುಗಳು ಜಲಾವೃತಗೊಂಡಿದೆ.