Publish Date: Sun, 31 Mar 2024 (12:07 IST)
Updated Date: Sun, 31 Mar 2024 (12:10 IST)
ಬೆಂಗಳೂರು: ಮಂಡ್ಯ ಲೋಕಸಭೆ ಚುನಾವಣೆ ಕಣ ರಂಗೇರುತ್ತಿದೆ. ಮಂಡ್ಯ ಕ್ಷೇತ್ರಕ್ಕೆ ಪಟ್ಟು ಹಿಡಿದಿರುವ ಸುಮಲತಾ ಅಂಬರೀಶ್ ಇಂದು ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿಯವರನ್ನು ಇಂದು ಭೇಟಿಯಾಗಲಿದ್ದಾರೆ.
ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಎಚ್ ಡಿ ಕುಮಾರಸ್ವಾಮಿ ಸ್ಪರ್ಧೆ ನಡೆಸಲು ನಿರ್ಧರಿಸಿದ್ದಾರೆ. ಆದರೆ ಮಂಡ್ಯ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ತನಗೇ ಟಿಕೆಟ್ ನೀಡಬೇಕು. ಮಂಡ್ಯ ಬಿಟ್ಟು ನಾನು ಬೇರೆಲ್ಲೂ ಹೋಗಲ್ಲ ಎಂದು ಸುಮಲತಾ ಪಟ್ಟು ಹಿಡಿದಿದ್ದಾರೆ.
ಇದೇ ವಿಚಾರವಾಗಿ ಸುಮಲತಾ ಜೊತೆ ಮಾತುಕತೆ ನಡೆಸಲು ಸಿದ್ಧ ಎಂದು ಕುಮಾರಸ್ವಾಮಿ ಈಗಾಗಲೇ ಹೇಳಿದ್ದರು. ಸುಮಲತಾ ನನ್ನ ಅಕ್ಕನ ಹಾಗೆ. ಅವರ ಜೊತೆ ಮಾತನಾಡುತ್ತೇನೆ ಎಂದಿದ್ದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಮತ್ತು ಸುಮಲತಾ ನಡುವೆ ತೀವ್ರ ಮಾತಿನ ಚಕಮಕಿಗಳೇ ನಡೆದಿತ್ತು.
ಇದೀಗ ಸುಮಲತಾ ತಮ್ಮ ಬೆಂಬಲಿಗರ ಜೊತೆ ಒಂದು ಸುತ್ತಿನ ಸಭೆ ನಡೆಸಿದ್ದಾರೆ. ನಾಳೆ ಮತ್ತೊಮ್ಮೆ ಬೆಂಬಲಿಗರ ಜೊತೆ ಮಂಡ್ಯದಲ್ಲಿ ಸಭೆ ನಡೆಸಲಿದ್ದಾರೆ. ಈ ಮಾತುಕತೆ ಬಳಿಕ ತಮ್ಮ ನಿರ್ಧಾರ ಘೋಷಿಸುವುದಾಗಿ ಹೇಳಿದ್ದರು. ಅದಕ್ಕೆ ಮೊದಲು ಇಂದು ಕುಮಾರಸ್ವಾಮಿ ಜೊತೆ ಮಾತುಕತೆ ನಡೆಸುತ್ತಿದ್ದು ಕುತೂಹಲಕ್ಕೆ ಕಾರಣವಾಗಿದೆ.