Publish Date: Wed, 27 Mar 2024 (18:35 IST)
Updated Date: Wed, 27 Mar 2024 (18:38 IST)
ಬೆಂಗಳೂರು: ಮಂಡ್ಯ ಕ್ಷೇತ್ರದ ಪ್ರಬಲ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಹಾಲಿ ಸಂಸದೆ ಸುಮಲತಾ ಅಂಬರೀಶ್ ಜತೆ ಬಿಜೆಪಿ- ಜೆಡಿಎಸ್‌ನ ಮಂಡ್ಯ ಅಭ್ಯರ್ಥಿ ಎಚ್‌ಡಿ ಕುಮಾರಸ್ವಾಮಿ ಅವರು ಸಮಯ ಬಂದಾಗ ಮಾತುಕತೆ ನಡೆಸುತ್ತೇನೆ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ರಾಮಾಂಜನೇಯ ಯುದ್ದವೇ ನಡೆದು ಹೋಗಿದೆ. ನಮ್ಮಲ್ಲಿ ಯುದ್ದ ಆಗೊಲ್ಲವಾ ಎಂದರು. ಸುಮಲತಾ ಅವರ ಜೊತೆಗೆ ಮಾತುಕತೆ ಮಾಡ್ತೀನಿ. ಎಲ್ಲವೂ ಸುಗಮವಾಗಿ ನಡೆಯುತ್ತದೆ. ಸುಮಲತಾ ನನಗೆ ಶತ್ರು ಅಲ್ಲ. ಚುನಾವಣೆಗಳು ಬಂದಾಗ ಕೆಲವು ವಿಚಾರದಲ್ಲಿ ಕೆಲವು ಭಿನ್ನಾಭಿಪ್ರಾಯಗಳು ಬಂದಿರುತ್ತವೆ. ಆ ಸಂದರ್ಭದಲ್ಲಿ ಹಲವಾರು ರೀತಿ ಚರ್ಚೆಗಳು ಆಗಿರುತ್ತದೆ. ಅದನ್ನ ಈಗ ಇಟ್ಟುಕೊಳ್ಳುವ ಅವಶ್ಯಕತೆ ಇಲ್ಲ ಎಂದರು.
ಈ ವೇಳೆ ಅಂಬರೀಶ್ ಜತೆ ಕಳೆದ ದಿನಗಳನ್ನು ಮೆಲುಕು ಹಾಕಿದ ಕುಮಾರಸ್ವಾಮಿ ಅವರು, ಅಂಬರೀಶ್ ಇದ್ದಾಗ ಅವರ ಜತೆ ಊಟ ಸವಿದಿದ್ದೇನೆ. ಸುಮಲತಾ ಅವರೇ ನನಗೆ ಊಟ ಬಡಿಸಿದ್ದರು ಎಂದರು.
ರಾಜಕೀಯದಲ್ಲಿ ಕೆಲವು ಸನ್ನಿವೇಶಗಳಲ್ಲಿ ಇಂತಹ ಸಂಘರ್ಷಗಳು ಆಗಿರುತ್ತವೆ. ರಾಮಾಂಜನೇಯ ಯುದ್ದವೇ ಆಗಿ ಹೋಗಿದೆ. ಇನ್ನು ನಾವು ಹುಲು ಮಾನವರು. ನಮ್ಮಲ್ಲಿ ಯುದ್ದ ಆಗದೇ ಇರುತ್ತದೆಯಾ? ದೊಡ್ಡ ಮಟ್ಟದಲ್ಲಿ ಅದನ್ನೇ ಸಾಧಿಸಿಕೊಂಡು ಹೋಗೋ ಅವಶ್ಯಕತೆ ಇಲ್ಲ. ಸಮಯ ಬಂದಾಗ ಸುಮಲತಾ ಜೊತೆ ಮಾತನಾಡುತ್ತೇನೆ ಎಂದು ತಿಳಿಸಿದರು.