ಚನ್ನಪಟ್ಟಣ: ಉಪಚುನಾವಣೆ ಪ್ರಚಾರದ ವೇಳೆ ತಮ್ಮ ಪುತ್ರ ಹಾಗೂ ತಮ್ಮ ಭಾವುಕ ಮಾತುಗಳನ್ನು ಲೇವಡಿ ಮಾಡಿದ ಕಾಂಗ್ರೆಸ್ ನಾಯಕರಿಗೆ ಎಚ್ ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ನಾನು ಕಣ್ಣೀರು ಹಾಕಿರುವುದು ಜನರ ನೋವುಗಳನ್ನು ನೋಡಿ. ಜನರ ನೋವುಗಳನ್ನು ನೋಡಿ ಕಣ್ಣೀರು ಹಾಕಿದ್ದೆ. ಎಲ್ಲರಿಗೂ ಕಣ್ಣೀರು ಬರಲ್ಲ, ಮಾತೃಹೃದಯದವರಿಗೆ ಮಾತ್ರ ಕಣ್ಣೀರು ಬರುತ್ತದೆ. ಜನರಿಗೆ ಸ್ಪಂದನೆ ಮಾಡುವವರಿಗೆ ಕಣ್ಣೀರು ಬರುತ್ತದೆ. ಕಲ್ಲು ಹೃದಯದವರಿಗೆ ಬರಲ್ಲ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಚನ್ನಪಟ್ಟಣ ಉಪಚುನಾವಣೆ ಪ್ರಚಾರ ಸಂದರ್ಭದಲ್ಲಿ ನಿಖಿಲ್ ಕುಮಾರಸ್ವಾಮಿ ಕಣ್ಣೀರು ಹಾಕಿದ್ದರು. ಈ ಹಿಂದೆ ಚುನಾವಣೆ ಪ್ರಚಾರದ ವೇಳೆ ಎಚ್ ಡಿ ಕುಮಾರಸ್ವಾಮಿ ಕೂಡಾ ಅನೇಕ ಬಾರಿ ಕಣ್ಣೀರು ಹಾಕಿದ್ದಿದೆ. ಇದನ್ನೇ ಇಟ್ಟುಕೊಂಡು ಕಾಂಗ್ರೆಸ್ ನಾಯಕರು ಲೇವಡಿ ಮಾಡಿದ್ದರು.
ಕಣ್ಣೀರು ಹಾಕುವವನು ಜನನಾಯಕ ಅಲ್ಲ, ಕಣ್ಣೀರು ಒರೆಸುವವನು ಜನನಾಯಕ ಎಂದು ಡಿಕೆ ಸುರೇಶ್ ಲೇವಡಿ ಮಾಡಿದ್ದಾರೆ. ಇನ್ನು, ಡಿಕೆ ಶಿವಕುಮಾರ್ ಕೂಡಾ ಈ ಬಗ್ಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿಯವರಿಗೆ ಚುನಾವಣೆ ಸಂದರ್ಭದಲ್ಲಿ ಮಾತ್ರ ಕಣ್ಣೀರು ಬರುತ್ತದೆ. ಇಷ್ಟು ದಿನ ಜನರ ಕಣ್ಣೀರು ಒರೆಸಲು ಅವರಿಗೆ ಅವಕಾಶವಿತ್ತಲ್ಲ. ಅದನ್ನು ಯಾಕೆ ಮಾಡಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು, ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಕೂಡಾ ವ್ಯಂಗ್ಯ ಮಾಡಿದ್ದು, ಕುಮಾರಸ್ವಾಮಿಗೆ ಸೋಲಿನ ಭಯ ಬಂದಿದೆ. ಅದಕ್ಕೇ ಕಣ್ಣೀರು ಹಾಕುತ್ತಿದ್ದಾರೆ ಎಂದು ಕಾಲೆಳೆದಿದ್ದಾರೆ.