ಬೆಂಗಳೂರು: ನಾನು ರಾಮನಗರ ಜಿಲ್ಲೆಗೆ ಹೊರಗಿನವನಲ್ಲ, ನಾನು ಮಣ್ಣಾಗೋದು ಕೇತಗಾನಹಳ್ಳಿಯಲ್ಲೇ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಕಾಂಗ್ರೆಸ್ ನಾಯಕರಿಗೆ ತಿರುಗೇಟು ಕೊಟ್ಟಿದ್ದಾರೆ.
ಚನ್ನಪಟ್ಟಣ ಉಪ ಚುನಾವಣೆಗೆ ತಮ್ಮ ಪುತ್ರನನ್ನು ನಿಲ್ಲಿಸಿ ಮಗನ ಪರ ಪ್ರಚಾರಕ್ಕೆ ಬಂದಿದ್ದಕ್ಕೆ ಕಾಂಗ್ರೆಸ್ ನಾಯಕರು ವಲಸಿಗ ಎಂದಿದ್ದಕ್ಕೆ ಎಚ್ ಡಿ ಕುಮಾರಸ್ವಾಮಿ ಈ ರೀತಿ ತಿರುಗೇಟು ಕೊಟ್ಟಿದ್ದಾರೆ. ರಾಮನಗರಕ್ಕೆ ನಾನು ಹೇಗೆ ಹೊರಗಿನವಾಗ್ತೀನಿ. ನನ್ನನ್ನು ಬೆಳೆಸಿದ್ದ ಕೇತಗಾನಹಳ್ಳಿಯ ಗ್ರಾಮ. ನಾನು ಇಲ್ಲಿಯೇ ಮಣ್ಣಾಗುವುದು ಎಂದು ಹೇಳಿದ್ದಾರೆ.
ನಾನು ಹುಟ್ಟಿದ್ದು ಹಾಸನದಲ್ಲಿಯೇ ಇರಬಹುದು. ಆದರೆ ರಾಮನಗರ ನನಗೆ ಪುನರ್ ಜನ್ಮ ಕೊಟ್ಟ ಜಿಲ್ಲೆ. ಇಲ್ಲಿಗೆ ನಾನು ಯಾವತ್ತೂ ಹೊರಗಿನವಲ್ಲ. ಇಟೆಲಿಯಲ್ಲಿ ಹುಟ್ಟಿದ ಪ್ರಿಯಾಂಕ ಗಾಂಧಿಯನ್ನು ವಯನಾಡಿಗೆ ತಂದು ಚುನಾವಣೆಗೆ ನಿಲ್ಲಿಸಬಹುದು. ನಾನು ಇಲ್ಲಿನ ಕನ್ನಡಿಗ. ಕನ್ನಡಿಗನಾಗಿ ನಾನು ಇಲ್ಲಿಗೆ ಬರಬಾರದಾ ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನು, ಉಪ ಚುನಾವಣೆ ಪ್ರಚಾರಕ್ಕೆ ಬಂದಿರುವುದಕ್ಕೆ ಟಾಂಗ್ ಕೊಟ್ಟಿರುವ ಕಾಂಗ್ರೆಸ್ ನಾಯಕರಿಗೆ ತಿರುಗೇಟು ಕೊಟ್ಟಿರುವ ಕುಮಾರಸ್ವಾಮಿ, ಇದು ಉಪ ಚುನಾವಣೆ. ನಾನು ಜನರಲ್ ಎಲೆಕ್ಷನ್ ಇರುವಾಗ ಬಂದಿರಲಿಲ್ಲ. ಈಗ ಪ್ರತೀ ಹಳ್ಳಿಗೆ ಬರುವ ನಿರ್ಧಾರ ಮಾಡಿದ್ದೇನೆ. ನಾನು ಬರಲು ಇವರ ಅಪ್ಪಣೆ ಪಡೀಬೇಕಾ ಎಂದಿದ್ದಾರೆ.