Publish Date: Sat, 22 Jun 2024 (13:59 IST)
Updated Date: Sat, 22 Jun 2024 (14:02 IST)
ಬೆಂಗಳೂರು: ಇಂದು ಎನ್ ಡಿಎ ಸಂಸದರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿಗೆ ಸೂರಜ್ ರೇವಣ್ಣ ಬಗ್ಗೆ ಪ್ರಶ್ನಿಸಿದಾಗ ಅವರು ಸಿಡಿಮಿಡಿಗೊಂಡರು.
ಸಹೋದರ ಎಚ್ ಡಿ ರೇವಣ್ಣ ಕುಟುಂಬ ಲೈಂಗಿಕ ಕಿರುಕುಳ ಆರೋಪಕ್ಕೊಳಗಾದ ಬಳಿಕ ಕುಮಾರಸ್ವಾಮಿ ಅಂತರ ಕಾಯ್ದುಕೊಂಡೇ ಬಂದಿದ್ದರು. ಪ್ರಜ್ವಲ್ ರೇವಣ್ಣ ವಿರುದ್ಧ ಆರೋಪಗಳ ಸುರಿಮಳೆಯಾಗುತ್ತಿರುವಾಗ ಕುಮಾರಸ್ವಾಮಿ ಅವರ ಕುಟುಂಬಕ್ಕೂ ನಮಗೂ ಸಂಬಂಧವಿಲ್ಲ. ಈ ಪ್ರಕರಣದಲ್ಲಿ ನಮ್ಮನ್ನು ಎಳೆಯಬೇಡಿ ಎಂದಿದ್ದರು.
ಇದೀಗ ಮಾಧ್ಯಮಗಳು ಯುವಕನೊಂದಿಗೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಕ್ಕೊಳಗಾಗಿರುವ ಸೂರಜ್ ರೇವಣ್ಣ ಬಗ್ಗೆ ಕೇಳಿದಾಗ ಗರಂ ಆಗಿದ್ದಾರೆ. ರಾಜ್ಯದ ಬಗ್ಗೆ ಏನಾದರೂ ಪ್ರಶ್ನೆಯಿದ್ದರೆ ಕೇಳಿ. ಆ ಬಗ್ಗೆ ನನ್ನನ್ನು ಏನೂ ಕೇಳಬೇಡಿ. ಈ ಥರ ಸಮಸ್ಯೆಗಳನ್ನು ನೋಡಿಕೊಳ್ಳಲು ಪೊಲೀಸರು, ಕಾನೂನು ಇದೆ ಎಂದರು.
ಇನ್ನು, ಚನ್ನಪಟ್ಟಣದಲ್ಲಿ ಡಿಕೆ ಶಿವಕುಮಾರ್ ಚುನಾವಣೆಗೆ ನಿಲ್ಲುತ್ತಿರುವ ಬಗ್ಗೆ ಪ್ರಶ್ನಿಸಿದಾಗ ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಚುನಾವಣೆಗೆ ನಿಲ್ಲಬಹುದು. ಡಿಕೆ ಶಿವಕುಮಾರ್ ಆದ್ರೂ ನಿಲ್ಲಲಿ, ಅವರ ಜೊತೆ ಬೇರೆ ನಾಲ್ಕು ಜನ ಬೇಕಾದರೂ ನಿಲ್ಲಲಿ. ನಮಗೆ ಸಂಬಂಧಪಡದ ವಿಷಯ ಎಂದಿದ್ದಾರೆ.