Publish Date: Sat, 22 Jun 2024 (15:10 IST)
Updated Date: Sat, 22 Jun 2024 (15:12 IST)
ಬೆಂಗಳೂರು: ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಿದ್ದ ಎನ್ ಡಿಎ ಸಂಸದರಿಗೆ ಅಭಿನಂದನೆ ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ಸಚಿವ, ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ, ಈ ಹಿಂದೆ ಬಿಜೆಪಿ ಜೊತೆಗೆ ರಾಜ್ಯದಲ್ಲಿ 20-20 ಸರ್ಕಾರ ಮಾಡಿದ್ದಕ್ಕೇ ನಾನು ಹೆಸರು ಗಳಿಸಿದೆ ಎಂದಿದ್ದಾರೆ.
ಈ ಹಿಂದೆ ಅಂದಿನ 20-20 ಸರ್ಕಾರ ನನ್ನ ಜೀವನದ ದೊಡ್ಡ ತಪ್ಪು ಎನ್ನುತ್ತಿದ್ದಾರೆ. ಆದರೆ ಇದೀಗ ಬಿಜೆಪಿ ಜೊತೆಗೆ ಜೆಡಿಎಸ್ ಕೇಂದ್ರ ಮಟ್ಟದಲ್ಲಿ ಸಖ್ಯ ಬೆಳೆಸಿದ್ದು, ಇದೀಗ ಅಂದಿನ ಸರ್ಕಾರ ಮತ್ತು ಬಿಎಸ್ ಯಡಿಯೂರಪ್ಪ ಅವರನ್ನು ಕುಮಾರಸ್ವಾಮಿ ಹಾಡಿ ಹೊಗಳಿದ್ದಾರೆ.
ಇಂದು ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅಂದು ಬಿಎಸ್ ವೈ ಜೊತೆ ಸರ್ಕಾರ ರಚಿಸಿದ್ದಕ್ಕೇ ನನಗೆ ರಾಜ್ಯದಲ್ಲಿ ಕೊಂಚ ಹೆಸರು ಮಾಡಲು ಸಾಧ್ಯವಾಯಿತು ಎಂದರು. ಅಂದು ಅಧಿಕಾರ ಕೊಡಲು ಆಗದೇ ಇದ್ದಿದ್ದು ಕೆಲವರು ಮಾಡಿದ ಕುತಂತ್ರದಿಂದಾಗಿ, ನನ್ನ ತಪ್ಪು ಅಗಿರಲಿಲ್ಲ ಎಂದರು.
ಇಂದು ಜನ ಬಿಜೆಪಿ-ಜೆಡಿಎಸ್ ಒಂದಾಗಿರಬೇಕೆಂದು ಬಯಸಿದ್ದಾರೆ. ಇದು ನನ್ನ ಸ್ವಂತ ಇಚ್ಛೆ ಕೂಡಾ. 2018 ರಲ್ಲೂ ನಾನು ಬಿಜೆಪಿ ಜೊತೆ ಅಧಿಕಾರ ಮಾಡಬೇಕು ಎಂದುಕೊಂಡಿದ್ದೆ. ಸ್ಥಳೀಯ ಮಟ್ಟದಿಂದಲೇ ನಮ್ಮ ಎರಡೂ ಪಕ್ಷಗಳೂ ಹೊಂದಾಣಿಕೆಯಿಂದ ಕೆಲಸ ಮಾಡಿದರೆ ಕಾಂಗ್ರೆಸ್ ಮಟ್ಟ ಹಾಕಬಹುದು ಎಂದಿದ್ದಾರೆ.