ಬೆಂಗಳೂರು: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮುಂದುವರಿಸುವ ಬಗ್ಗೆ ಕೇಂದ್ರ ಸಚಿವ, ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಮಹತ್ವದ ಹೇಳಿಕೆ ನೀಡಿದ್ದಾರೆ.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಕೆಲವು ಸ್ಥಳೀಯ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದರ ಬಗ್ಗೆ ಇಂದು ಮಾಧ್ಯಮಗಳು ಎಚ್ ಡಿ ಕುಮಾರಸ್ವಾಮಿಯವರನ್ನು ಪ್ರಶ್ನೆ ಮಾಡಿದ್ದಾರೆ. ಇದರ ಜೊತೆ ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಗೆಲುವಿನ ಬಗ್ಗೆಯೂ ಪ್ರಶ್ನೆ ಮಾಡಿದ್ದಾರೆ.
ಇದಕ್ಕೆ ಉತ್ತರಿಸಿದ ಅವರು ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟಕ್ಕೆ ಬರುತ್ತದೆ ಎಂದು ನೀವೇ ಹೇಳಿದ್ದೀರಿ. ಅದರಂತೆ ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮೈತ್ರಿ ಕೂಟಕ್ಕೆ ಗೆಲುವಾಗಿದೆ.
ನಮ್ಮಲ್ಲೂ ಸ್ಥಳೀಯ ಸಂಸ್ಥೆ ಚುನಾವಣೆಯಿದೆ. ಅದರ ಬಗ್ಗೆ ನಮ್ಮ ಪಕ್ಷವೂ ಸಿದ್ಧತೆ ಮಾಡಬೇಕು. ಅದು ಜಿಬಿಎ ಚುನಾವಣೆ ಮಾತ್ರವಲ್ಲ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗೂ ಸಿದ್ಧತೆ ಮಾಡಬೇಕು. ನಮ್ಮಲ್ಲಿ ಮುಕ್ತವಾದ ತೀರ್ಮಾನ ಇಟ್ಟುಕೊಂಡಿದ್ದೇವೆ. ನಮ್ಮಲ್ಲಿ ಮೈತ್ರಿ ವಿಚಾರದಲ್ಲಿ ಗೊಂದಲಕ್ಕೆ ಎಡೆ ಮಾಡಿಕೊಡಬಾರದು ಎಂಬ ಅಭಿಪ್ರಾಯವಿದೆ. ಮುಂದಿನ ದಿನಗಳಲ್ಲಿ ಯಾವ ರೀತಿ ರಾಜಕೀಯ ಬೆಳವಣಿಗೆಯಾಗಲಿದೆ, ಸ್ಥಳೀಯ ಬಿಜೆಪಿ ನಾಯಕರ ಅಭಿಪ್ರಾಯ ಏನಿದೆ ಅದನ್ನು ನೋಡಿಕೊಂಡು ತೀರ್ಮಾನ ಮಾಡಬೇಕಿದೆ. ನಮ್ಮ ಉದ್ದೇಶ ಕಾಂಗ್ರೆಸ್ ನನ್ನು ಅಧಿಕಾರದಿಂದ ದೂರವಿಡಬೇಕು ಎಂದಾಗಿದೆ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಬೆಂಗಳೂರಿನಲ್ಲಿ ಕೆಲವು ವರ್ಷಗಳಿಂದ ಅಭಿವೃದ್ಧಿಯಾಗುತ್ತಿಲ್ಲ. ಅಭಿವೃದ್ದಿ ಹೆಸರಿನಲ್ಲಿ ಲೂಟಿ ಆಗುತ್ತಿದೆ. ಬೆಂಗಳೂರು ಅಭಿವೃದ್ಧಿಗೆ ಯಾವ ಪಕ್ಷದ ಕೊಡುಗೆ ಏನಿದೆ ಎಂಬ ವಿಷಯ ಇಟ್ಟುಕೊಂಡು ಜನರತ್ತ ಹೋಗಬೇಕಿದೆ ಎಂದಿದ್ದಾರೆ.