Publish Date: Sat, 02 Nov 2024 (10:15 IST)
Updated Date: Sat, 02 Nov 2024 (10:23 IST)
ಹಾಸನ: ಇತಿಹಾಸ ಪ್ರಸಿದ್ಧ ಹಾಸನಾಂಬೆ ದೇವಾಲಯದ ಗರ್ಭಗುಡಿ ನಾಳೆ ಮುಚ್ಚಲಿದ್ದು, ಇಂದು ಭಕ್ತರ ಪಾಲಿಗೆ ಕೊನೆಯ ದಿನ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ.
ಸಾರ್ವಜನಿಕ ದರ್ಶನಕ್ಕೆ ಇಂದು ಕೊನೆಯ ದಿನವಾಗಿರುವುದರಿಂದ ಸಾಕಷ್ಟು ಸಂಖ್ಯೆಯಲ್ಲಿ ದೇವಿಯ ದರ್ಶನಕ್ಕೆ ಭಕ್ತರು ಬರುತ್ತಿದ್ದಾರೆ. ಜೊತೆಗೆ ವೀಕೆಂಡ್ ಕೂಡಾ ಆಗಿರುವುದರಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದಾರೆ. ಈ ಬಾರಿ ಅವ್ಯವಸ್ಥೆಗಳ ನಡುವೆಯೂ ದಾಖಲೆಯ ಆದಾಯ ಸಂಗ್ರಹವಾಗಿದೆ.
ವರ್ಷಕ್ಕೊಮ್ಮೆ ಮಾತ್ರ ಹಾಸನಾಂಬೆ ದೇವಿಯ ಗರ್ಭಗುಡಿ ತೆರೆಯಲಾಗುತ್ತದೆ. ನಾಳೆಗೆ ಗರ್ಭಗುಡಿ ಮುಚ್ಚಿದರೆ ಮುಂದಿನ ವರ್ಷವೇ ಮತ್ತೆ ತೆರೆಯಲಾಗುತ್ತದೆ. 13 ದಿನಗಳ ಕಾಲ ಅದ್ಧೂರಿಯಾಗಿ ಜಾತ್ರೆ ನಡೆದಿದ್ದು ಈ ಬಾರಿ ದೀಪಾಲಂಕಾರ, ವಿಶೇಷ ಸಾಂಸ್ಕೃತಿ ಕಾರ್ಯಕ್ರಮಗಳೊಂದಿಗೆ ನೋಡುಗರ ಮನ ಸೆಳೆದಿದೆ.
ಈ ಬಾರಿ ಕೇವಲ ವಿಶೇಷ ಪಾಸ್ ನಿಂದಲೇ ಕೋಟ್ಯಾಂತರ ರೂಪಾಯಿ ಆದಾಯ ಗಳಿಕೆಯಾಗಿದೆ. ಹಾಸನಾಂಬ ದೇವಾಲಯದ ಜಾತ್ರೆ ಅದ್ಧೂರಿಯಾಗಿ ನಡೆಸಲು ಪೌರ ಕಾರ್ಮಿಕರಿಂದ ಹಿಡಿದು ಪೊಲೀಸ್ ಇಲಾಖೆ, ಅಧಿಕಾರಿಗಳವರೆಗೂ ಶ್ರಮಿಸಿದ್ದಾರೆ. ಎಲ್ಲರ ಶ್ರಮದ ಫಲವಾಗಿ ಅದ್ಧೂರಿಯಾಗಿ ಜಾತ್ರೆ ನೆರವೇರಿದೆ.