ಹಾಸನ: ಇತಿಹಾಸ ಪ್ರಸಿದ್ಧ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ಭಾಗ್ಯ ಕಲ್ಪಿಸುವ ಕ್ಷೇತ್ರದಲ್ಲಿ ಈ ಬಾರಿ ಉತ್ಸವನ್ನು ಅದ್ದೂರಿಯಾಗಿ ಆಚರಿಸಲು ಸಿದ್ಧತೆ ನಡೆಯುತ್ತಿದೆ.
ಅ.9 ರಂದು ಹಾಸನಾಂಬ ದೇಗುಲದ ಬಾಗಿಲು ಶಾಸ್ತ್ರೋಕ್ತವಾಗಿ ತೆರೆಯಲಿದ್ದು, ಅ.23ರಂದು ದೇವಾಲಯದ ಬಾಗಿಲು ಮುಚ್ಚಲಿದೆ. ಸಾರ್ವಜನಿಕರ ದರ್ಶನಕ್ಕೂ ಅವಕಾಶ ಮಾಡಿಕೊಡಲಾಗಿದೆ.
ಹಾಸನಾಂಬ ಮತ್ತು ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಹಾಗೂ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಪೂರ್ವಭಾವಿ ಸಭೆ ನಡೆಸಿ ಅಗತ್ಯ ಪೂರ್ವ ತಯಾರಿಯೊಂದಿಗೆ ಭರದಿಂದ ಸಿದ್ಧತೆ ಸಾಗಿದೆ.
ಕಳೆದ ಬಾರಿ 20 ಲಕ್ಷಕ್ಕೂ ಹೆಚ್ಚು ಭಕ್ತರು ದೇವಿಯ ದರ್ಶನ ಪಡೆದಿದ್ದರು. ಈ ಬಾರಿ ಇನ್ನೂ ಭಕ್ತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ನೂಕುನುಗ್ಗಲು ಆಗದಂತೆ, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಅಗತ್ಯ ಕ್ರಮಕ್ಕೆ ಮುಂದಾಗಿದೆ.
ವಿಶೇಷ ದರ್ಶನಕ್ಕೆ ಬರುವಂತಹ ಭಕ್ತರಿಗೆ ₹ 300 ಹಾಗೂ ₹ 1000 ಪಾಸ್ ವ್ಯವಸ್ಥೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ವಿಐಪಿ, ವಿವಿಐಪಿ ಪಾಸ್‌ಗಳನ್ನು ರದ್ದು ಮಾಡಿದ್ದು ಗೋಲ್ಡ್ ಪಾಸ್ ಜಾರಿಗೆ ತರಲಾಗಿದೆ.
ಒಂದು ಪಾಸ್‌ಗೆ ಒಬ್ಬರಿಗೆ ಮಾತ್ರ ಅವಕಾಶವಿದ್ದು, ದಿನದಲ್ಲಿ ಎರಡು ಗಂಟೆ ಮಾತ್ರ ದೇವಿ ದರ್ಶನಕ್ಕೆ ಅವಕಾಶ ನೀಡಲಾಗಿದೆ. ದರ್ಶನಕ್ಕೆ ಬರುವ ವೃದ್ಧರು ಮತ್ತು ಅಂಗವಿಕಲರನ್ನು ದೇವರ ದರ್ಶನಕ್ಕೆ ಕರೆದುಕೊಂಡು ಹೋಗಲು ವ್ಯವಸ್ಥೆ ಕಲ್ಪಿಸಲಾಗಿದೆ.