ಗುಂಡ್ಲುಪೇಟೆ: ಹುಲಿ ಹಿಡಿಯಲು ಅರಣ್ಯ ಇಲಾಖೆಯ ಅಧಿಕಾರಿಗಳು ವಿಫಲರಾಗಿದ್ದಾರೆಂದು ರೊಚ್ಚಿಗೆದ್ದ ರೈತರ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನೇ ದಿಗ್ಬಂಧನ ವಿಧಿಸಿದ ಪ್ರಸಂಗ ಮಂಗಳವಾರ ಸಂಭವಿಸಿದೆ.
ಬಂಡೀಪುರ ಹುಲಿ ಸಂರಕ್ಷಿತ ಅರಣ್ಯಕ್ಕೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಹುಲಿಗಳ ಉಪಟಳ ಹೆಚ್ಚಾಗಿದೆ ಎಂದು ರೈತರು ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದಾರೆ.
ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನೇ ಬೋನಿನೊಳಗೆ ಕೂಡಿ ಹಾಕಿದ್ದೇವೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಬೊಮ್ಮಲಾಪುರ ಗ್ರಾಮದ ರೈತ ಗಂಗಪ್ಪನವರ ಜಮೀನಿನ ಸುತ್ತಮುತ್ತ ಹುಲಿ ಹಾಗೂ ಚಿರತೆಗಳ ಉಪಟಳ ಹೆಚ್ಚಾಗಿದ್ದು ಜಾನುವಾರು ಮೇಲೆ ದಾಳಿ ಮಾಡಿ ಕೊಂದು ಹಾಕಿವೆ. ರೈತರ ಒತ್ತಾಯಕ್ಕೆ ಮಣಿದು ಹುಲಿ ಸೆರೆಗೆ ನೆಪಕ್ಕೆ ಬೋನು ಇರಿಸಿರುವ ಅಧಿಕಾರಿಗಳು ಇತ್ತ ಸುಳಿದಿಲ್ಲ. ಮೂರು ದಿನಗಳ ಹಿಂದೆ ಹುಲಿ ದಾಳಿಗೆ ಕರುವೊಂದು ಸತ್ತರೂ ಸ್ಥಳಕ್ಕೆ ಬಂದಿರಲಿಲ್ಲ.
ಹಾಗಾಗಿ, ಬೊಮ್ಮಲಾಪುರ ಗ್ರಾಮಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳನ್ನು ಬೋನಿನೊಳಗೆ ಕೂಡಿಹಾಕಬೇಕಾಯಿತು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ಅಧಿಕಾರಿಗಳಿಗೆ ದಿಗ್ಬಂಧನ ಹಾಕಿರುವ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಗುಂಡ್ಲುಪೇಟೆ ಎಸಿಎಫ್ ಸುರೇಶ್ ಹಾಗೂ ಬಂಡೀಪುರ ಎಸಿಎಫ್ ನವೀನ್ ಕುಮಾರ್ ಅವರು ರೈತರ ಮನವೊಲಿಸಲು ಯತ್ನಿಸಿದ್ದಾರೆ.
ಸಾಕಾನೆ ಬಳಸಿ ಹುಲಿ ಸೆರೆಗೆ ಕೂಂಬಿಂಗ್ ಮಾಡುವುದಾಗಿ ಭರವಸೆ ನೀಡಿದ ಬಳಿಕ ಅಧಿಕಾರಿಗಳನ್ನು ಬಿಡುಗಡೆಗೊಳಿಸಲಾಯಿತು.