ಬೆಂಗಳೂರು: ಸತತ ಟೀಕೆಗಳ ಬಳಿಕ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡಲು ಮುಂದಾಗಿದೆ. ಇಂದೇ ನಿಮ್ಮ ಖಾತೆಗಳನ್ನು ಚೆಕ್ ಮಾಡಿಕೊಳ್ಳಿ.
ಕಳೆದ ಮೂರು ತಿಂಗಳಿನಿಂದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಮಾಡಿರಲಿಲ್ಲ. ಇದರ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಸರ್ಕಾರ ಸುಳ್ಳು ಭರವಸೆ ನೀಡಿದೆ ಎಂದು ಜನರು ಹಿಡಿಶಾಪ ಹಾಕುತ್ತಿದ್ದರು. ವಿಪಕ್ಷಗಳೂ ಇದನ್ನೇ ದಾಳವಾಗಿಟ್ಟುಕೊಂಡು ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿತ್ತು.
ಇದೀಗ ಕೊನೆಗೂ ಎಚ್ಚೆತ್ತುಕೊಂಡ ಸರ್ಕಾರ ಹಣ ಬಿಡುಗಡೆ ಮಾಡಲು ಮುಂದಾಗಿದೆ. ಇಂದಿನಿಂದಲೇ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡಲು ಆರಂಭಿಸಲಿದೆ. ಪಂಚಾಯತಿ ಇಇಒ ಗಳ ಮೂಲಕ ಹಣ ಬಿಡುಗಡೆಯಾಗಲಿದೆ.
ಇಂದು ನವಂಬರ್ ತಿಂಗಳ ಕಂತು ಬಿಡುಗಡೆಯಾಗಲಿದೆ. ಸೋಮವಾರದಂದು ಡಿಸೆಂಬರ್ ತಿಂಗಳ ಕಂತು ಬಿಡುಗಡೆಯಾಗಲಿದೆ. ಈ ರೀತಿ ಹಂತ ಹಂತವಾಗಿ ಮೂರು ತಿಂಗಳ ಹಣ ಬಿಡುಗಡೆ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ.