Publish Date: Tue, 07 Apr 2026 (13:52 IST)
Updated Date: Tue, 07 Apr 2026 (13:55 IST)
ಬಾಗಲಕೋಟೆ: ಜಾತಿ ಜಾತಿಗಳು, ಧರ್ಮಗಳ ನಡುವೆ ವಿಷಬೀಜ ಬಿತ್ತಿ ಮತಬ್ಯಾಂಕ್ ಮಾಡಿಕೊಳ್ಳುವುದೇ 79 ವರ್ಷಗಳ ಕಾಂಗ್ರೆಸ್ಸಿನ ಸಾಧನೆ ಎಂದು ಮಾಜಿ ಉಪ ಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ ಅವರು ಆರೋಪಿಸಿದ್ದಾರೆ.
ಇಂದು ಇಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂಥ ಮಹಾನ್ ಮೋಸಗಾರರನ್ನು ನಂಬದಿರಿ ಎಂದು ಮತದಾರರನ್ನು ವಿನಂತಿಸಿದರು. 17 ಬಜೆಟ್ ಮಂಡಿಸುವಾಗ ರಾಜಕೀಯ ಪುನರ್ಜನ್ಮ ನೀಡಿದ ಬಾಗಲಕೋಟೆ ನೆನಪಾಗಲಿಲ್ಲವೇ ಎಂದು ಪ್ರಶ್ನಿಸಿದರು. ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಟೀಕಿಸಿದರು.
3 ವರ್ಷಗಳಿಂದ ಕೇವಲ ಗ್ಯಾರಂಟಿ ಎಂದು ಮೋಸ ಮಾಡಿದ್ದಾರೆ. ಬಡವರ ಮನಸ್ಸನ್ನು ಕದ್ದು ಮತಬ್ಯಾಂಕ್ ಮಾಡಿಕೊಳ್ಳುವ ಪ್ರಯತ್ನ ಇವರದು ಎಂದು ದೂರಿದರು. 2018, 2023ರಲ್ಲಿ ನೀವು ಘೋಷಿಸಿದ ಯಾವುದಾದರೂ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೀರಾ ಎಂದು ಕಾಂಗ್ರೆಸ್ಸಿನವರನ್ನು ಪ್ರಶ್ನಿಸಿದರು.
ಮುಖ್ಯಮಂತ್ರಿ, 20 ಸಚಿವರು, 50 ಜನ ಶಾಸಕರು ಚುನಾವಣೆ ಗೆಲ್ಲಲು ಭ್ರಷ್ಟಾಚಾರದಿಂದ ಮಾಡಿದ ಕೋಟ್ಯಂತರ ಹಣವನ್ನು ಹಂಚುತ್ತಿದ್ದಾರೆ ಎಂದು ಆರೋಪಿಸಿದರು. ನದಿ ನೀರಿಗಿಂತ ಹೆಚ್ಚು ಹೆಂಡದ ಹೊಳೆ ಹರಿಸಲಾಗುತ್ತಿದೆ. ಹೆಂಡ, ಕೋಟ್ಯಂತರ ರೂಪಾಯಿ ಹಂಚುವ ಮೂಲಕ ಗೆಲ್ಲುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಸರಕಾರಿ ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಂಡು, ಸರಕಾರಿ ವಾಹನಗಳಲ್ಲಿ ಹಣ, ಕರಪತ್ರ ಹಂಚುತ್ತಿರುವುದು ನಾಚಿಕೆಗೇಡಿನ ಸಂಗತಿ. ಕಾಂಗ್ರೆಸ್ ಗೂಂಡಾಗಳನ್ನು ಕಳಿಸಿ ಗಲಾಟೆ ಮಾಡಿಸುತ್ತಿದ್ದಾರೆ. ಇದನ್ನು ಪ್ರತಿಯೊಬ್ಬರೂ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು. ಬಡವರು, ಕೃಷಿ ಕಾರ್ಮಿಕರ ಸಲುವಾಗಿ ಉದ್ಯೋಗ ಖಾತ್ರಿ ಜಿ ರಾಮ್ ಜಿ ಯೋಜನೆಯನ್ನು ಯಾಕೆ ನಿಲ್ಲಿಸಿದ್ದೀರಿ ಎಂದು ಪ್ರಶ್ನಿಸಿದರು. ಬಡವರ ಬಗ್ಗೆ ಚಿಂತೆ ಇಲ್ಲ. ರಾಜಕಾರಣ ಮಾಡಲು ಜಿ ರಾಮ್ ಜಿ ಯೋಜನೆ ನಿಲ್ಲಿಸಿದ್ದಾರೆ ಎಂದು ಆರೋಪಿಸಿದರು.
ಇವರು ಎಸ್‍ಸಿ ಜನಾಂಗಕ್ಕೆ ವಿಶ್ವಾಸದ್ರೋಹ, ದೊಡ್ಡ ಅನ್ಯಾಯ ಮಾಡಿದ್ದಾರೆ. ಮೋದಿಜೀ ಅವರು ಎಲ್ಲ ಬಡವರಿಗಾಗಿ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಅವುಗಳನ್ನು ಬಾಗಲಕೋಟೆಯಲ್ಲಿ ಅನುಷ್ಠಾನಕ್ಕೆ ತರುತ್ತಿಲ್ಲ ಎಂದು ಆಕ್ಷೇಪಿಸಿದರು. ಅಭಿವೃದ್ಧಿಯ ಹರಿಕಾರ ವೀರಣ್ಣ ಚರಂತಿಮಠರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.