Select Your Language

Notifications

webdunia
webdunia
webdunia
webdunia

2028 ರಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ನಿರ್ನಾಮ: ಬಿ.ಶ್ರೀರಾಮುಲು

B Sriramulu
ಬಾಗಲಕೋಟೆ: ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಬೇರುಸಮೇತ ಕಿತ್ತು ಹಾಕಲು ಜನ ತೀರ್ಮಾನಿಸಿದ್ದಾರೆ. 2028 ರಲ್ಲಿ ಕಾಂಗ್ರೆಸ್ ನಿರ್ನಾಮವಾಗಲಿದೆ. ಬಾಗಲಕೋಟೆ ಮತ್ತು ದಾವಣಗೆರೆಯಲ್ಲಿ ಬಿಜೆಪಿ ಅಭ್ಯರ್ಥಿಗಳೇ ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಹೇಳಿದ್ದಾರೆ.

ಇಂದು ಇಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎರಡೂ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಲು ಜನರೇ ತೀರ್ಮಾನ ಮಾಡಿದ್ದಾರೆ. ಇಂತಹ ಅವಕಾಶವನ್ನು ಜನರು ತಪ್ಪಿಸಿಕೊಳ್ಳಬಾರದು. ಒಂದು ವೇಳೆ ಕಾಂಗ್ರೆಸ್ ಗೆದ್ದರೆ ಮತ್ತೆ ಇವರ ನಾಟಕ ಎರಡು ವರ್ಷ ಮುಂದುವರಿಯುತ್ತದೆ. ಡಿನ್ನರ್ ಮತ್ತು ಲಂಚ್ ನಲ್ಲೇ ಸರ್ಕಾರ ಕಳೆಯುತ್ತಾರೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಹತ್ತು ದಿನದಿಂದ ಪ್ರಚಾರ ಮಾಡ್ತಾ ಇದ್ದಾರೆ. ಅಭಿವೃದ್ಧಿ ನೋಡಿ ಮತ ಹಾಕಿ ಅಂತಾರೆ, ಗ್ಯಾರಂಟಿ ನೋಡಿ ಮತ ಹಾಕಿ ಅಂತಾರೆ. ಆದರೆ ಜನ ಅಭಿವೃದ್ಧಿ ನೋಡಿ ಮತ ಹಾಕಲ್ಲ. ಏಕೆಂದರೆ ಏನೂ ಅಭಿವೃದ್ಧಿ ಮಾಡಿಲ್ಲ. ಎಲ್ಲದರ ದರ ಏರಿಕೆ ಮಾಡಿ ಬಡವರು ಬದುಕಲು ಆಗ್ತ ಇಲ್ಲ. ಇನ್ನು ಗ್ಯಾರಂಟಿಗಳನ್ನು ಸರಿಯಾಗಿ ಕೊಟ್ಟಿಲ್ಲ. ಹಾಗಾಗಿ ಗ್ಯಾರಂಟಿ ನೋಡಿಯೂ ಮತ ಹಾಕಲ್ಲ. ಇದೆಲ್ಲ ಆದ ನಂತರ ಜಾತಿ ನೋಡಿ ಮತ ಕೊಡಿ ಅಂತ ಹೊಸ ರಾಗ ತೆಗೆದಿದ್ದಾರೆ ಎಂದರು.

ಈ ಸರ್ಕಾರ ಹೊಸ ಬಸ್ ಖರೀದಿ ಮಾಡಿಲ್ಲ. ಬಸ್ ಪಂಚರ್ ಆದರೆ ಜಾಕ್ ಖರೀದಿ ಮಾಡಲು ಹಣವಿಲ್ಲ. ಹೊಸ ಬಸ್ ಇಲ್ಲದೆ ವಿದ್ಯಾಭ್ಯಾಸಕ್ಕೆ ತೊಂದರೆ ಆಗಿದೆ.  ದಿನಸಿ ಸೇರಿದಂತೆ ಅಗತ್ಯ ವಸ್ತು ತುಟ್ಟಿ ಆಗಿದೆ. ಗ್ಯಾರಂಟಿ ಹೇಳಿಕೊಂಡೇ ಮೂರು ವರ್ಷ ಕಳೆದರು. ಗೃಹಲಕ್ಷ್ಮಿ ಅಂತ ಹೆಣ್ಣು ಮಕ್ಕಳಿಗೆ ಎರಡು ಸಾವಿರ ಕೊಟ್ಟು ಗಂಡನ ಜೋಬಿಗೆ ಕತ್ತರಿ ಹಾಕುವ ಕೆಲಸವನ್ನು ಈ ಸರ್ಕಾರ ಮಾಡ್ತ ಇದೆ ಎಂದು ವ್ಯಂಗ್ಯವಾಡಿದರು. 

ಇಷ್ಟು ವರ್ಷದಲ್ಲಿ ಸರ್ಕಾರದ ಸಾಧನೆ ಏನೂ ಇಲ್ಲ. ಚುನಾವಣೆ ಬಂದಾಗ ಮಾತ್ರ ಗೃಹಲಕ್ಷ್ಮಿ ನೆನಪಾಗಿ ಖಾತೆಗೆ ಹಣ ಹಾಕ್ತಾರೆ. ಗೃಹ ಲಕ್ಷ್ಮಿಯಲ್ಲೂ ಐದು ಸಾವಿರ ಕೋಟಿ ಭ್ರಷ್ಟಾಚಾರ ಆಗಿದೆ ಎಂದರು. ಅಕ್ಕಿ ಕೊಟ್ಟಿದ್ದೇವೆ ಅಂತಾರೆ. ಆದರೆ ಸಿದ್ದರಾಮಯ್ಯ ಅವರೇ ನೀವು ನೀವು ಅಕ್ಕಿ ಕೊಟ್ಟಿಲ್ಲ. ನರೇಂದ್ರ ಮೋದಿ ಸರ್ಕಾರ ಕೊಟ್ಟಿದ್ದು. ಆದರೆ ಚೀಲಕ್ಕೆ ದಾರ ಕೊಟ್ಟು ಅಕ್ಕಿ ನಮ್ಮದೇ ಅಂತಿದ್ದಾರೆ. ರಾಜ್ಯ ಸರ್ಕಾರದ್ದು ಒಂದು ಕೆ ಜಿ ಇಲ್ಲ ಎಂದು ವಿವರಿಸಿದರು.

ಬಿಜೆಪಿ ಜಾತೀವಾದಿಗಳ ಪಕ್ಷ ಅಂತ ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ಇವರು ಜಾತಿಗಳನ್ನು ರಾಜಕೀಯಕ್ಕೆ ಬಳಸುತ್ತಾರೆ. ಮುಡಾ ಕೇಸ್ ಬಂದಾಗ ಹಿಂದುಳಿದ ಜಾತಿಯವರು ಅಂದ್ರಿ. ಅದರಲ್ಲಿ ನೂರಾರು ಕೋಟಿ ಭ್ರಷ್ಟಾಚಾರ ಆಗಿದೆ. ಇಂತಹ ನಾಟಕವನ್ನು ನಿಲ್ಲಿಸಿ ಎಂದು ಆಗ್ರಹಿಸಿದರು.
ಸಿದ್ದರಾಮಯ್ಯ ಅವರು ದಲಿತರ ವಿರೋಧಿ. ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ ಆಯಿತು. ಎಸ್‍ಸಿಪಿ/ಟಿಎಸ್‍ಪಿ ಹಣವನ್ನೂ ಗ್ಯಾರಂಟಿಗಳಿಗೆ ಬಳಸಿದ್ದೀರಿ.  ದಲಿತರ ಉದ್ದಾರಕ್ಕೆ ಇರುವ ನಿಗಮದ ಹಣವನ್ನು ಬಳಸಿ ಲೋಕಸಭೆ ಚುನಾವಣೆ ಮಾಡಿದ್ದೀರಿ ಎಂದರು. ಒಳಮೀಸಲಾತಿಗೆ ಮೂರು ದಶಕದಿಂದ ಹೋರಾಟ ನಡೆಯುತ್ತಾ ಇದೆ.  ಆದರೆ ಅದನ್ನು ಸರಿಯಾಗಿ ಜಾರಿ ಮಾಡಲಿಲ್ಲ ಎಂದು ನುಡಿದರು.

ಬಿಜೆಪಿ ದಲಿತರಿಗೆ ನೆರವು ನೀಡಿತ್ತು. ದಲಿತರನ್ನು ಕಂಡರೆ ಕಾಂಗ್ರೆಸ್‍ನವರಿಗೆ ಉರಿ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸೋಲಿಸಿದ ಕಾಂಗ್ರೆಸ್ ಅವರು ಸತ್ತಾಗ ಮಣ್ಣು ಹಾಕಲು ಜಾಗ ಕೊಡಲಿಲ್ಲ. ಆದರೆ ಈಗ ದೊಡ್ಡದಾಗಿ ಹಿಂದುಳಿದ ವರ್ಗದ ಬಗ್ಗೆ ಮಾತನಾಡುತ್ತಾರೆ ಎಂದರು.  ರಾಜ್ಯದಲ್ಲಿ ರಸ್ತೆಗಳಿಲ್ಲ, ಮೂಲಸೌಕರ್ಯ ಇಲ್ಲ. ಸಂಬಳ ಕೊಡಲು ಹಣ ಇಲ್ಲದೆ ಎಲ್ಲಾ ಇಲಾಖೆ ನೌಕರರು ಮುಷ್ಕರ ಮಾಡ್ತ ಇದ್ದಾರೆ. ರಾಜ್ಯ ಆರ್ಥಿಕ ದಿವಾಳಿಯಾಗಿದೆ ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಇರಾನ್ ಗೆ ಆಘಾತ: ಪರಮೋಚ್ಛ ನಾಯಕ ಮೊಜ್ತಬಾ ಖಮೇನಿ ಸ್ಥಿತಿ ಏನಾಗಿದೆ ಗೊತ್ತಾ