Publish Date: Mon, 06 Apr 2026 (16:51 IST)
Updated Date: Mon, 06 Apr 2026 (16:53 IST)
ಮೈಸೂರು: ಇನ್ನೆರಡು ವರ್ಷ ಸಿಎಂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿರುತ್ತಾರೆಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
ಇಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, 2013ರಲ್ಲಿ ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿ ಎಂದು ಹೈಕಮಾಂಡ್ ಘೋಷಿಸಿರಲಿಲ್ಲ. ಆದರೂ ಅವರೇ ಆ ಅವಧಿಯನ್ನು ಸಿಎಂ ಆಗಿ ಪೂರ್ಣಗೊಳಿಸಿದರು. 2023ರಲ್ಲೂ ಸಿದ್ದರಾಮಯ್ಯ ಮುಖ್ಯಮಂತ್ರಿ ಎಂದು ಹೈಕಮಾಂಡ್ ಹೇಳಿತ್ತು. ಅಧಿಕಾರದ ಅವಧಿ 2028ರವರೆಗೆ ಇದೆ. ಅದನ್ನು ಪೂರ್ಣಗೊಳಿಸಬೇಕು ತಾನೆ? ನೀವೇ 5 ವರ್ಷವೂ ಸಿಎಂ ಎಂದು ಹೈಕಮಾಂಡ್ ಪ್ರತ್ಯೇಕವಾಗಿ ಸ್ಪಷ್ಟೀಕರಣ ನೀಡುವ ಅಗತ್ಯವಿಲ್ಲ ಎಂದು ಹೇಳಿದರು.
ಹೈಕಮಾಂಡ್‌ನಿಂದ ಯಾವ ಗೊಂದಲವೂ ಇಲ್ಲ. ಇನ್ನೂ ಹೈಕಮಾಂಡ್ ಯಾವಾತ್ತಾದ್ರೂ ಸಿದ್ದರಾಮಯ್ಯ ಅವರ ಅಧಿಕಾರದ ಅವಧಿ ಇಂತಿಷ್ಟೆಂದು ಹೇಳಿದೆಯೇ. ಬದಲಾವಣೆ ಬಗ್ಗೆ ಮಾತನಾಡಿದೆಯೇ? ಅದರರ್ಥ ಆ ರೀತಿಯ ಯಾವ ಬೆಳವಣಿಗೆಯೂ ಇಲ್ಲ ಎಂದೇ ಎಂದರು.
ಮುಖ್ಯಮಂತ್ರಿ ಸ್ಥಾನ ಬದಲಾವಣೆ ಮಾಡಬೇಕಾಗಿರುವುದು ಹೈಕಮಾಂಡ್. ಆ ಬಗ್ಗೆ ಎಂದಾದರೂ ಮಾತನಾಡಿದ್ದರೆ ಅದಕ್ಕೊಂದು ಅರ್ಥ ಬರುತ್ತಿತ್ತು. ಬರುತ್ತಿರುವ ಹೇಳಿಕೆ ಅವರದ್ದು ವೈಯಕ್ತಿಕ ಎಂದರು.