ಹೊಸದಿಲ್ಲಿ: ಮಧ್ಯಮ ವರ್ಗದ ವ್ಯಕ್ತಿಯ ಎಕ್ಸ್ ಪೋಸ್ಟ್‌ಗೆ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಪ್ರತಿಕ್ರಿಯಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದ್ದಾರೆ.
ಮಧ್ಯಮ ವರ್ಗದವರಿಗೆ ಸ್ವಲ್ಪ ರಿಲೀಫ್ ನೀಡಿ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಮನವಿ ಮಾಡಿ ತುಷಾರ್ ಶರ್ಮಾ ಎಂಬುವವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಕೇಂದ್ರ ಸಚಿವೆ ಕೂಡ ಪ್ರತಿಕ್ರಿಯಿಸಿದ್ದಾರೆ. ಅವರು ನೀಡಿರುವ ಮಾಹಿತಿ ಮೌಲ್ಯಯುತವಾಗಿದ್ದು, ಸರ್ಕಾರ ಜನರ ಧ್ವನಿಯನ್ನು ಆಲಿಸುತ್ತದೆ ಎಂದು ಹೇಳಿದ್ದಾರೆ. ಅದಲ್ಲದೇ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿರುವುದಕ್ಕೆ ಧನ್ಯವಾದ ಕೂಡ ಹೇಳಿದ್ದಾರೆ.
ತುಷಾರ್ ಶರ್ಮಾ ಅವರ ಪೋಸ್ಟ್‌ನಲ್ಲಿ ಹೀಗಿದೆ: ದೇಶದ ಅಭಿವೃದ್ಧಿಗೆ ನಿಮ್ಮ ಪ್ರಯತ್ನಗಳು ಮತ್ತು ಕೊಡುಗೆಗಳನ್ನು ನಾವು ಶ್ಲಾಘಿಸುತ್ತೇವೆ. ನಿಮ್ಮ ಕೆಲಸಗಳಿಗೆ ನಮ್ಮ ಸಹಮತ ಇದೆ. ಆದರೆ, ಮಧ್ಯಮ ವರ್ಗದವರಿಗೆ ಸ್ವಲ್ಪ ನಿರಾಳತೆ ನೀಡಿ ಎಂದು ಮನವಿ ಮಾಡುತ್ತೇನೆ. ಇದರಲ್ಲಿ ಬಹಳಷ್ಟು ಸವಾಲುಗಳಿವೆ ಎಂಬುದು ನನಗೆ ಗೊತ್ತು. ಆದರೆ, ಇದು ನನ್ನ ಹೃದಯಪೂರ್ವಕ ವಿನಂತಿ ಎಂದು ಹೇಳಿದ್ದಾರೆ.
ತುಷಾರ್ ಶರ್ಮಾ ಅವರ ಮನವಿಗೆ ಪ್ರತಿಕ್ರಿಯಿಸಿರುವ ನಿರ್ಮಲಾ ಸೀತಾರಾಮನ್, ನಿಮ್ಮ ಮಾತುಗಳಿಗೆ ಹಾಗೂ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿರುವುದಕ್ಕೆ ಧನ್ಯವಾದಗಳು. ನೀವು ಎತ್ತಿರುವ ಸಮಸ್ಯೆಯನ್ನು ನಾನು ಅರ್ಥ ಮಾಡಿಕೊಳ್ಳುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಜನರಿಗೆ ಸ್ಪಂದಿಸುವ ಸರ್ಕಾರವಾಗಿದೆ. ಜನರ ಧ್ವನಿಯನ್ನು ಆಲಿಸಿ, ಪರಿಹಾರ ನೀಡುತ್ತದೆ. ಪರಿಸ್ಥಿತಿ ಅರ್ಥ ಮಾಡಿಕೊಂಡಿದ್ದಕ್ಕೆ ಮತ್ತೊಮ್ಮೆ ಧನ್ಯವಾದ. ನೀವು ನೀಡಿದ ಮಾಹಿತಿ ಅತ್ಯಮೂಲ್ಯವಾಗಿದೆ ಎಂದು ಹೇಳಿದ್ದಾರೆ.