ಬೆಂಗಳೂರು: ನಿವೃತ್ತ ಡಿಜಿಪಿ ಓಂ ಪ್ರಕಾಶ್ ಸಾವಿನ ಬಗ್ಗೆ ಒಂದೊಂದೇ ಸತ್ಯಗಳು ಈಗ ಬಹಿರಂಗವಾಗುತ್ತಿದೆ. ಕೊಲೆ ಆರೋಪದಲ್ಲಿ ಪತ್ನಿ ಪಲ್ಲವಿಯನ್ನು ಅರೆಸ್ಟ್ ಮಾಡಲಾಗಿದೆ. ಮಗಳನ್ನೂ ವಶಕ್ಕೆ ಪಡೆಯಲಾಗಿದೆ. ಇದೀಗ ಬಂದಿರುವ ಮಾಹಿತಿ ಪ್ರಕಾರ ಊಟ ಮಾಡುತ್ತಿರುವಾಗಲೇ ಓಂ ಪ್ರಕಾಶ್ ಮೇಲೆ ಡೆಡ್ಲೀ ಅಟ್ಯಾಕ್ ನಡೆದಿತ್ತು ಎನ್ನಲಾಗಿದೆ.
ಓಂ ಪ್ರಕಾಶ್ ಕೊಲೆಯಾಗುವ ಸಂದರ್ಭದಲ್ಲಿ ಊಟ ಮಾಡುತ್ತಿದ್ದರು ಎಂಬುದಕ್ಕೆ ಕುರುಹುಗಳು ಸಿಕ್ಕಿವೆ. ಡೈನಿಂಗ್ ಟೇಬಲ್ ಮೇಲೆ ಊಟದ ತಟ್ಟೆ ಹಾಗೆಯೇ ಇತ್ತು. ಊಟ ಮಾಡುತ್ತಿರುವಾಗಲೇ ಜಗಳ ವಿಕೋಪಕ್ಕೆ ತಿರುಗಿದೆ ಎನ್ನಲಾಗಿದೆ.
ಓಂ ಪ್ರಕಾಶ್ ಮೀನು ತರಿಸಿಕೊಂಡಿದ್ದರು. ಮೀನಿನ ಊಟ ಮಾಡುತ್ತಿರುವಾಗಲೇ ಅವರ ಕಣ್ಣಿಗೆ ಖಾರದ ಪುಡಿ ಎರಚಲಾಗಿದೆ. ಬಳಿಕ ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಇರಿಯಲಾಗಿದೆ. ಅಲ್ಲದೆ, ಬಿಯರ್ ಬಾಟಲಿಯಿಂದಲೂ ಚುಚ್ಚಲಾಗಿದೆ ಎಂಬುದಕ್ಕೆ ಕುರುಹಾಗಿ ಒಡೆದ ಬಿಯರ್ ಬಾಟಲಿಗಳು ಸಿಕ್ಕಿವೆ. ಓಂ ಪ್ರಕಾಶ್ ಮೃತದೇಹ ಡೈನಿಂಗ್ ಹಾಲ್ ನಲ್ಲೇ ಇತ್ತು.
ಕೊಲೆ ಮಾಡಿದ ಬಳಿಕ ಪತ್ನಿ ಪಲ್ಲವಿ ಮತ್ತು ಮಗಳು ಕೃತಿ ಮಹಡಿಯಲ್ಲಿರುವ ಕೊಠಡಿಗೆ ಹೋಗಿ ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸರು ಬಂದಾಗ ಮೊದಲು ಮಗಳು ಕೃತಿ ಬಾಗಿಲು ತೆಗೆಯಲು ಕಿರಿಕ್ ಮಾಡಿದ್ದಾಳೆ. ಬಳಿಕ ಪೊಲೀಸರು ಬಾಗಿಲು ಒಡೆದು ಒಳ ಹೋಗಿದ್ದಾರೆ ಎನ್ನಲಾಗಿದೆ. ಇನ್ನು, ಯಾರು ಕೊಲೆ ಮಾಡಿದ್ದು ಎಂದು ಪ್ರಶ್ನಿಸಿದಾಗ ನಾನೇ ಕೊಲೆ ಮಾಡಿದ್ದು ಎಂದು ಪಲ್ಲವಿ ಒಪ್ಪಿಕೊಂಡಿದ್ದರು ಎನ್ನಲಾಗಿದೆ.