ಬೆಂಗಳೂರು: ನಾಳೆ ಯುಗಾದಿ ಹಬ್ಬ ನಿಮಿತ್ತ ಇಂದಿನಿಂದಲೇ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿದೆ. ಈ ನಡುವೆ ಹೂವು, ಹಣ್ಣು ಬೆಲೆ ಗಗನಕ್ಕೇರಿದ್ದು ಕೇಳುವ ಹಾಗೆಯೇ ಇಲ್ಲ ಎನ್ನುವ ಪರಿಸ್ಥಿತಿಯಾಗಿದೆ.
ಹಬ್ಬಕ್ಕೆ ಹೋಳಿಗೆ ಮಾಡಬೇಕೆಂದರೆ ತೆಂಗಿನಕಾಯಿಯೂ ದುಬಾರಿ, ಬೆಲ್ಲವೂ ದುಬಾರಿ ಎಂಬ ಪರಿಸ್ಥಿತಿಯಾಗಿದೆ. ಬೆಲೆ ಏರಿಕೆ ನಡುವೆ ಈ ಬಾರಿ ಹಬ್ಬದಲ್ಲಿ ಸಿಹಿಗಿಂತ ಕಹಿಯೇ ಜಾಸ್ತಿ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಹೂ, ಹಣ್ಣು ಖರೀದಿಗೆ ಜನ ಈಗಾಗಲೇ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದಾರೆ. ಆದರೆ ಹೂವಿನ ಬೆಲೆ ಸಾಮಾನ್ಯ ದಿನಕ್ಕಿಂತ ದುಪ್ಪಟ್ಟಾಗಿದೆ. ಗುಲಾಬಿ, ಸೇವಂತಿಗೆ ಕಾಲು ಕೆ.ಜಿ.ಗೆ 35-40 ರೂ.ಗೆ ಖರೀದಿ ಮಾಡುತ್ತಿದ್ದ ಜನ ಈಗ 50-70 ರೂ. ನೀಡಬೇಕಾಗಿದೆ.
600 ರೂ.ಗಳಿದ್ದ ಮಲ್ಲಿಗೆ 1200 ರೂ.ಗೆ ಬಂದು ತಲುಪಿದೆ. ಕನಕಾಂಬರಕ್ಕೂ ಹೆಚ್ಚು ಕಡಿಮೆ ಇಷ್ಟೇ ಬೆಲೆಯಿದೆ. ಹಣ್ಣುಗಳ ಬೆಲೆಯೂ ಸಾಮಾನ್ಯ ದಿನಕ್ಕಿಂತ 20-40 ರೂ.ವರೆಗೆ ಏರಿಕೆಯಾಗಿದೆ. 200 ರೂ. ಇದ್ದ ಸೇಬಿನ ಬೆಲೆ 240 ರೂ. ಆಗಿದ್ದರೆ ದಾಳಿಂಬೆ 150 ರೂ ಇದ್ದಿದ್ದು 250 ಕ್ಕೆ ತಲುಪಿದೆ. ಇನ್ನು, ಮಾವಿನ ಹಣ್ಣಿನ ಬೆಲೆಯೂ 300 ರ ಗಡಿಯಲ್ಲಿದೆ.