Select Your Language

Notifications

webdunia
webdunia
webdunia
webdunia

ನೂತನ ಸಚಿವಾಲಯದ ರಚನೆಯಿಂದ ಸಹಕಾರ ಕ್ಷೇತ್ರಕ್ಕೆ ಮತ್ತಷ್ಟು ಬಲ

webdunia
bangalore , ಶನಿವಾರ, 25 ಸೆಪ್ಟಂಬರ್ 2021 (22:04 IST)
ನೂತನ ಸಚಿವಾಲಯದ ರಚನೆಯಿಂದ ಸಹಕಾರ ಕ್ಷೇತ್ರಕ್ಕೆ ಮತ್ತಷ್ಟು ಬಲ ಬಂದಂತಾಗಲಿದೆ ಮಾತ್ರವಲ್ಲದೆ ಸ್ಪರ್ಧೆಗಿಳಿಯಲು ಪ್ರೇರೇಪಿಸಿದಂತಾಗಲಿದೆ. ಸಹಕಾರ ಇಲಾಖೆಯಲ್ಲಿ ಕೆಳ ಹಂತದಿಂದ ಎಲ್ಲಾ ವರ್ಗದವರಿಗೆ ಆತ್ಮಸ್ಥೈರ್ಯ ಕೂಡ ಸಿಕ್ಕಂತಾಗಲಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ನವದೆಹಲಿಯಲ್ಲಿ ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಸಹಕಾರ ಸಮ್ಮೇಳನದಲ್ಲಿ ಕೇಂದ್ರ ಗೃಹ ಸಚಿವರು ಹಾಗೂ ಸಹಕಾರ ಸಚಿವ  ಅಮಿತ್ ಶಾ ಅವರ ಜೊತೆ ಕರ್ನಾಟಕ ರಾಜ್ಯ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಭಾಗವಹಿಸಿ ಮಾತನಾಡಿದರು.
ಸಹಕಾರ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ನೂತನ ಸಹಕಾರ ಸಚಿವಾಲಯ ರಚನೆ ಮಾಡಿದ ನಿರ್ಧಾರ ಐತಿಹಾಸಿಕವಾದದ್ದು. ಇಂತಹ ಮಹತ್ವದ ನಿರ್ಧಾರವನ್ನು ಕೈಗೊಂಡ ಕೇಂದ್ರ ಸರ್ಕಾರಕ್ಕೆ  ಕರ್ನಾಟಕದ ಜನತೆ ಮತ್ತು ಕೋಆಪರೇಟಿವ್ ಸೊಸೈಟಿ ಸದಸ್ಯರ ಪರವಾಗಿ ಅಭಿನಂದನೆಗಳು ಎಂದರು.
ಸಹಕಾರ್ ಸೇ ಸಮೃದ್ಧಿ ಧ್ಯೇಯವಾಕ್ಯದೊಂದಿಗೆ ರಚನೆಯಾಗಿರುವ ಸಹಕಾರ ಸಚಿವಾಲಯದಿಂದ, ಆಡಳಿತಕ್ಕೆ ಹೊಸ ರೂಪ ಸಿಗಲಿದೆ ಹಾಗೂ ಕಾನೂನು ಮತ್ತು ನೀತಿಯ ಚೌಕಟ್ಟು ಸಿಗುವುದರಿಂದ ಸಹಕಾರ ಚಳವಳಿಯಿಂದ ಹುಟ್ಟು ಪಡೆದ ಸಹಕಾರ ಇಲಾಖೆಯನ್ನು ಮತ್ತಷ್ಟು ಬಲಪಡಿಸಿದಂತಾಗಲಿದೆ. ಸಹಕಾರ ಚಳವಳಿಯ ಧ್ಯೇಯೋದ್ದೇಶಗಳನ್ನು ಸಾಕಾರಗೊಳಿಸಲು ಮತ್ತು ಗ್ರಾಮೀಣ ಜನರ ಶ್ರೇಯೋಭಿವೃದ್ಧಿಗಾಗಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಕಂಡಿದ್ದ ಕನಸುಗಳನ್ನು ನೂತನ ಸಹಕಾರ ಸಚಿವಾಲಯ ನನಸು ಮಾಡಲಿದೆ. ದೇಶದ ಜನತೆ ಆರ್ಥಿಕವಾಗಿ ಸಶಕ್ತರಾಗಲು ಸಹಕಾರ ಚಳವಳಿ ತಳಹದಿಯಾಗಿದ್ದು ಇದೀಗ ಅದರ ಆಶೋತ್ತರಗಳನ್ನು ಈಡೇರಿಸಲು ಸಹಕಾರ ಸಚಿವಾಲಯ ನೆರವಾಗಲಿದೆ ಎಂದರು.
ಬಹುರಾಜ್ಯ ಸಹಕಾರ ಸಂಸ್ಥೆಗಳ ಅಭಿವೃದ್ಧಿ ಕಾರ್ಯಗಳನ್ನು ಉತ್ತೇಜಿಸಲು ಹಾಗೂ ವ್ಯವಹಾರೀಕರಣವನ್ನು ಸರಳೀಕರಣಗೊಳಿಸಲು ನೂತನ ಸಚಿವಾಲಯವು ನೆರವಾಗಲಿದೆ ಎಂಬ ವಿಶ್ವಾಸವಿದೆ. ಸಮುದಾಯ ಆಧಾರಿತ ಅಭಿವೃದ್ಧಿ ಸಹಭಾಗಿತ್ವಕ್ಕೆ ಸಹಕಾರ ಸಚಿವಾಲಯ ರಚನೆ ಮಾಡುವ ಸಂಬಂಧ ಹಣಕಾಸು ಸಚಿವರು ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದನ್ನು ಈಡೇರಿಸಲಾಗಿದೆ. ಇದು ಕೇಂದ್ರ ಸರ್ಕಾರದ ಬದ್ಧತೆಯನ್ನು ತೋರಿಸಲಿದೆ ಮತ್ತು ಬಹುರಾಜ್ಯ ಸಹಕಾರ ಸಂಸ್ಥೆಗಳ ಭಾಂದವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲು ಸಹಕಾರಿಯಾಗಲಿದೆ ಎಂದರು.
ಸಹಕಾರ ಇಲಾಖೆ ವರ್ಷದಿಂದ ವರ್ಷಕ್ಕೆ ಬೆಳವಣಿಗೆ:
ರಾಜ್ಯದಲ್ಲಿ ಸಹಕಾರ ಇಲಾಖೆಯ ಸಾಧನೆಗಳು
ಸರ್ಕಾರದ ಸಂಪೂರ್ಣ ಸಹಕಾರದ ಫಲವಾಗಿ ಸಹಕಾರ ಇಲಾಖೆ ವರ್ಷದಿಂದ ವರ್ಷಕ್ಕೆ ಬೆಳವಣಿಗೆಯತ್ತ ಸಾಗುತ್ತಿದೆ. ಬ್ಯಾಂಕ್. ಸಕ್ಕರೆ, ಡೈರಿ, ಹೌಸಿಂಗ್, ರೇಷ್ಮೆ ಇಂಡಸ್ಟ್ರಿ, ಮೀನುಗಾರಿಕೆ ಹೀಗೆ ಹಲವು ಕ್ಷೇತ್ರಗಳಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದ ಜನರ ಆರ್ಥಿಕಮಟ್ಟ ಸುಧಾರಿಸುವಲ್ಲಿ ಸಹಕಾರ ಇಲಾಖೆ ದಾಪುಗಾಲಿಟ್ಟಿದೆ ಎಂದರು.
ಕರ್ನಾಟಕ ಸೌಹಾರ್ದ ಒಕ್ಕೂಟದ ಅಧ್ಯಕ್ಷ ಕೃಷ್ಣರೆಡ್ಡಿ, ಸಹಕಾರ ಭಾರತೀಯ ರಾಷ್ಟ್ರೀಯ ಅಧ್ಯಕ್ಷ ರಮೇಶ್ ವೈದ್ಯ, ಮಂಡ್ಯ ಜಿಲ್ಲಾ ಸಹಕಾರ ಬ್ಯಾಂಕಿನ ಅಧ್ಯಕ್ಷ ಸಿ.ಪಿ.ಉಮೇಶ್, ಸಹಕಾರ ಸಚಿವರ ವಿಶೇಷ ಕರ್ತವ್ಯಾಧಿಕಾರಿ ದಿನೇಶ್ ಗೂಳಿಗೌಡ ಸೇರಿದಂತೆ ಮತ್ತಿತರರಿದ್ದರು.
 
ಸಹಕಾರ ಸಮ್ಮೇಳನಕ್ಕೆ  ಅಮಿತ್ ಶಾ ಅವರಿಗೆ ಆಹ್ವಾನ:
ಕರ್ನಾಟಕ ರಾಜ್ಯ ಮಟ್ಟದ ಸಹಕಾರ ಸಮ್ಮೇಳನವನ್ನು ನವೆಂಬರ್ ಅಥವಾ ಡಿಸೆಂಬರ್ 2021ರಲ್ಲಿ ನಡೆಸಲು ಉದ್ದೇಶಿಸಲಾಗಿದ್ದು ಈ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರನ್ನು ರಾಜ್ಯದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಆಹ್ವಾನಿಸಿದರು. ಸಚಿವರ ಮನವಿಗೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದರು. 
 
ಸಹಕಾರ ಇಲಾಖೆಗೆ ಅವಶ್ಯಕವಿರುವ ಬದಲಾವಣೆಗಳು:
* ಗ್ರಾಮೀಣ ಭಾಗದಲ್ಲಿ ಸಹಕಾರ ತತ್ವಗಳು ಬಲಗೊಳ್ಳಬೇಕೆಂದರೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ಕೋಆಪರೇಟಿವ್ ಡೆವಲಪ್‌ಮೆಂಟ್ ಸ್ಥಾಪನೆಯ ಅವಶ್ಯಕತೆಯಿದೆ. ತಮ್ಮದೇ ನಿರ್ದೇಶಕರನ್ನು ಹೊಂದಿದ್ದರೆ ರಾಜ್ಯದಲ್ಲಿ ಕೋಆಪರೇಟಿವ್ ಸಂಸ್ಥೆಗಳು ಅಭಿವೃದ್ಧಿಯಾಗಲಿದ್ದು ಈ ಬಗ್ಗೆ ರಾಜ್ಯಕ್ಕೆ ಸಲಹೆ ನೀಡಬೇಕು.
 
* ಬಹುರಾಜ್ಯ ಸಹಕಾರ ಸಂಸ್ಥೆಗಳಿಗೆ ಕಚ್ಚಾವಸ್ತುಗಳ ಸಂಗ್ರಹ ಮತ್ತು ಉತ್ಪನ್ನಗಳಿಗೆ ದರ ನಿಗದಿಪಡಿಸುವ ಹಾಗೂ ಅವುಗಳಿಗೆ ಮಾರುಕಟ್ಟೆಗಳ ಅವಶ್ಯಕತೆಯಿದೆ. ಹೊಸ ಸಂಸ್ಥೆಗಳ ರಚನೆಯಿಂದ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಲು ಮತ್ತು ರಾಜ್ಯಗಳೊಂದಿಗೆ ಸಮನ್ವಯ ಸಾಧಿಸಬಹುದಾಗಿದೆ. 
 
* ಸಹಕಾರ ಸಂಸ್ಥೆಗಳಲ್ಲಿ  ಮಾಹಿತಿ  ತಂತ್ರಜ್ಞಾನದವನ್ನು  ಅಳವಡಿಸಿ ಒಂದೇ ಸಾಫ್ಟ್‌ವೇರ್ ಮಾಡಲು ರಾಜ್ಯ ಸರ್ಕಾರಕ್ಕೆ ಅಗತ್ಯ ನೆರವು ನೀಡಬೇಕು 
 
* ನಬಾರ್ಡ್ ಹಂತದಲ್ಲಿರುವ 5 ಸಾವಿರ ಕೋಟಿ ರೂ. ಕಾರ್ಪ್ಸ್ ಬಡ್ಡಿರಹಿತ ಹಣದ ಅವಶ್ಯಕತೆಯಿದೆ. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಗೆ ವಿತರಿಸಲು ಈ ಬಡ್ಡಿರಹಿತ ಹಣ ನೀಡಲು ನೆರವಾಗಲಿದೆ.
 
* ಸೂಕ್ತ ಬೆಳೆ ಆಯ್ಕೆಗೆ ರೈತರಿಗೆ ದರ ಮುನ್ಸೂಚನೆ ಹಾಗೂ ಹವಮಾನ ಮುನ್ಸೂಚನೆ ಹಾಗೂ ಇತರೆ ವೈಜ್ಞಾನಿಕ ಮಾನದಂಡಗಳ ಅವಶ್ಯಕತೆಯಿದೆ.
 
* ರೈತರು ಬೆಳೆದ ಬೆಳೆಗಳನ್ನು ದೇಶದ ನಾನಾ ಮಾರುಕಟ್ಟೆಗಳಿಗೆ ಸಾಗಿಸಲು ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸಲು ರಸ್ತೆ ಅಭಿವೃದ್ಧಿ ಮತ್ತು ಹೊಸ ನೀತಿಗಳ ಅವಶ್ಯಕತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ವಾಮಿಗಳು ರಚಿಸಿರುವ ಮಹಾತ್ಮರ ಚರಿತಾಮೃತ ಗ್ರಂಥ ಸಾರ್ಥಕ ಬದುಕಿಗೆ ದಾರಿ