ಬೆಂಗಳೂರು: ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದಿರುವ 49 ವರ್ಷದ ಡಾ.ಹೆಚ್.ಎಲ್. ನಾಗರಾಜು (ನಿಶ್ಚಲಾನಂದನಾಥ ಸ್ವಾಮೀಜಿ) ಅವರು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠಕ್ಕೆ ಉತ್ತರಾಧಿಕಾರಿಯಾಗಿ ಇಂದು ವಿಧಿ, ವಿಧಾನಗಳೊಂದಿಗೆ ಪಟ್ಟಾಧಿಕಾರ ವಹಿಸಿಕೊಳ್ಳಲಿದ್ದಾರೆ.
ಕೆಎಎಸ್ ಅಧಿಕಾರಿಯಾಗಿದ್ದ 49 ವರ್ಷದ ಡಾ.ಹೆಚ್.ಎಲ್. ನಾಗರಾಜು ಅವರನ್ನು ಪೀಠಕ್ಕೆ ಉತ್ತರಾಧಿಕಾರಿಯಾಗಿ ನೇಮಿಸಲಾಗಿದೆ ಎಂದು ವಿಶ್ವಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಶುಕ್ರವಾರ ತಿಳಿಸಿದ್ದರು.
ಶನಿವಾರ ಸಂಜೆ ಆರಂಭವಾಗುವ ವಿಧಿ, ವಿಧಾನ ಕಾರ್ಯಕ್ರಮಗಳು ಭಾನುವಾರ ಸಂಜೆವರೆಗೂ ಜರುಗಲಿವೆ. ಸುಮಾರು ಹತ್ತು ಸಾವಿರ ಜನರು ಭಾಗವಹಿಸುವ ನಿರೀಕ್ಷೆಯಿದೆ. ಆದಿಚುಂಚನಗಿರಿ ಪೀಠದ ನಿರ್ಮಲಾನಂದನಾಥ ಸ್ವಾಮೀಜಿ, ನಿಡುಮಾಮಿಡಿ ಜಗದ್ಗುರು ಮಠದ ವೀರಭದ್ರ ಚನ್ನಮಲ್ಲ ದೇಶೀಕೇಂದ್ರ ಸ್ವಾಮೀಜಿ ಸೇರಿದಂತೆ ನಾಡಿನ ಅನೇಕ ಮಠಗಳ ಪೀಠಾಧ್ಯಕ್ಷರ ಸಮ್ಮುಖದಲ್ಲಿ ನಿಶ್ಚಲಾನಂದನಾಥ ಸ್ವಾಮೀಜಿ ಸನ್ಯಾಸ ದೀಕ್ಷೆ ಪಡೆದು ಉತ್ತರಾಧಿಕಾರಿ ಪಟ್ಟಕ್ಕೇರಲಿದ್ದಾರೆ.
ಧಾರ್ಮಿಕತೆ ಮತ್ತು ಸಮಾಜ ಸೇವಾ ಮನೋಭಾವ ಹೊಂದಿದ್ದ ನಾಗರಾಜ್ ಅವರು ಅವಿವಾಹಿತರಾಗಿಯೇ ಇದ್ದರು. ಶನಿವಾರದಿಂದ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಮಹಾಸ್ವಾಮೀಜಿಯಾಗಿ ಮಠದ ಕಾರ್ಯಗಳು, ಶ್ರೀಮಠದ ಶಿಕ್ಷಣ ಸಂಸ್ಥೆಗಳನ್ನು ಇನ್ನಷ್ಟು ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗಲಿದ್ದಾರೆ.
ನನಗೆ ಈಗ 81 ವರ್ಷ ಆಗಿದೆ. ಹೀಗಾಗಿ, ನಮ್ಮ ಮಠದೊಂದಿಗೆ ಅನೇಕ ವರ್ಷಗಳಿಂದ ಸಂಪರ್ಕದಲ್ಲಿರುವ, ಸೇವಾ ಕಾರ್ಯಗಳನ್ನು ಮಾಡತ್ತಾ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಹೆಚ್.ಎಲ್.ನಾಗರಾಜು ಅವರನ್ನು ಉತ್ತರಾಧಿಕಾರಿಯಾಗಿ ಭಗವಂತನ ಇಚ್ಛೆಯಂತೆ ಆಯ್ಕೆ ಮಾಡಲಾಗಿದೆ ಎಂದು ಚಂದ್ರಶೇಖರನಾಥ ಸ್ವಾಮೀಜಿ ಹೇಳಿದರು.