ಪ್ರಚೋದನಕಾರಿ ಹೇಳಿಕೆ ನೀಡಿದ BJP ಸಂಸದೆ ಸಾದ್ವಿ ಪ್ರಜ್ಞಾಸಿಂಗ್ ಅವರ ವಿರುದ್ಧ ಕಾಂಗ್ರೆಸ್ ದೂರು ನೀಡಿತ್ತು. ಈ ದೂರಿನ ಆಧಾರದ ಮೇಲೆ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೊನ್ನೆ ಹಿಂದೂ ಜಾಗರಣ ವೇದಿಕೆಯ ತ್ರೈ ವಾರ್ಷಿಕ ಸಮ್ಮೇಳನದಲ್ಲಿ ಸಾದ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರು ಆಡಿರುವ ಪ್ರಚೋದನಕಾರಿ ಮಾತುಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು. ಇದರ ವಿರುದ್ಧ ರಾಜಕೀಯ ವಿಶ್ಲೇಷಕ ತೆಹಸೀನ್ ಪೂನಾವಾಲಾ ಎಂಬುವರು ದೂರು ದಾಖಲಿಸಿಕೊಳ್ಳುವಂತೆ ಟ್ವಿಟರ್ನಲ್ಲಿ ಪೊಲೀಸರಿಗೆ ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಕೋಟೆ ಪೊಲೀಸರು, ಠಾಣೆಗೆ ಬಂದು ದೂರು ನೀಡುವಂತೆ ಸೂಚಿಸಿ ನೋಟಿಸ್ ನೀಡಿದ್ದರು. ಹಾಗಾಗಿ ಪೂನಾವಾಲ ಪರವಾಗಿ ಜಿಲ್ಲಾ ಕಾಂಗ್ರೆಸ್ನಿಂದ BJP ಸಂಸದೆ ವಿರುದ್ಧ ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ಕೋಟೆ ಪೊಲೀಸರು 153A, 153B, 268 ಕಲಂಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.