Publish Date: Tue, 06 Aug 2024 (16:15 IST)
Updated Date: Tue, 06 Aug 2024 (16:17 IST)
ಬೆಂಗಳೂರು: ಕಾಂಗ್ರೆಸ್ ಜನಾಂದೋಲನ ಹೋರಾಟದ ವೇಳೆ ಹೆಲ್ಮೆಟ್ ಹಾಕದೇ ಬೈಕ್ ರಾಲಿಯಲ್ಲಿ ಭಾಗಿಯಾಗಿ ಟೀಕೆಗೊಳಗಾಗಿದ್ದ ಡಿಕೆ ಶಿವಕುಮಾರ್ ಈಗ ಕೊನೆಗೂ ಟೀಕೆಗಳಿಂದ ಎಚ್ಚೆತ್ತುಕೊಂಡಿದ್ದಾರೆ.
ಇಂದು ಮಂಡ್ಯ ಜನಾಂದೋಲನ ಸಮಾವೇಶಕ್ಕೆ ಮೊದಲು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಬೈಕ್ ರಾಲಿಯಲ್ಲಿ ಆಗಮಿಸಿದರು. ಇಂದು ಕೂಡಾ ಬುಲೆಟ್ ಬೈಕ್ ನಲ್ಲಿ ತಮ್ಮ ಪಕ್ಷದ ನಾಯಕರ ಬೈಕ್ ನಲ್ಲಿ ಹಿಂದೆ ಕೂತುಕೊಂಡು ಡಿಕೆ ಶಿವಕುಮಾರ್ ಬೈಕ್ ರೈಡ್ ಮಾಡಿದರು.
ಆದರೆ ಇಂದು ಅವರು ಬೈಕ್ ರಾಲಿ ವೇಳೆ ಮರೆಯದೇ ಹೆಲ್ಮೆಟ್ ಧರಿಸಿದ್ದರು. ಅವರು ಮಾತ್ರವಲ್ಲ, ಅವರ ಜೊತೆ ಬೈಕ್ ಸವಾರಿ ಮಾಡುತ್ತಿದ್ದ ಹಲವರು ಹೆಲ್ಮೆಟ್ ಧರಿಸಿದ್ದು ಕಂಡುಬಂದಿದೆ. ಡಿಕೆ ಶಿವಕುಮಾರ್ ಕಳೆದ ಎರಡು ಬಾರಿ ರಾಲಿಯಲ್ಲಿ ಹೆಲ್ಮೆಟ್ ಧರಿಸದೇ ಇದ್ದಿದ್ದರಿಂದ ಸಾರ್ವಜನಿಕರು ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.
ಸಂಚಾರ ನಿಯಮದ ಪ್ರಕಾರ ಹೆಲ್ಮೆಟ್ ಇಲ್ಲದೇ ಬೈಕ್ ನಲ್ಲಿ ಪ್ರಯಾಣಿಸುವುದು ಶಿಕ್ಷಾರ್ಹವಾಗಿದೆ. ಆದರೆ ಡಿಕೆಶಿ ಹೆಲ್ಮೆಟ್ ಹಾಕದೇ ಸಂಚಾರ ನಿಯಮ ಉಲ್ಲಂಘಿಸಿದ್ದಾರೆ. ಹೀಗಾಗಿ ಸಂಚಾರ ನಿಯಮ ಉಲ್ಲಂಘಿಸಿದ ಡಿಕೆಶಿಗೂ ದಂಡ ಹಾಕುತ್ತೀರಾ ಎಂದು ಟ್ರಾಫಿಕ್ ಪೊಲೀಸರಿಗೆ ಸಾರ್ವಜನಿಕರು ಪ್ರಶ್ನೆ ಮಾಡಿದ್ದರು.