Publish Date: Fri, 02 Aug 2024 (14:19 IST)
Updated Date: Fri, 02 Aug 2024 (14:23 IST)
ಬೆಂಗಳೂರು: ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ಕೌಂಟರ್ ಕೊಡಲು ರಾಜ್ಯ ಕಾಂಗ್ರೆಸ್ ಹಮ್ಮಿಕೊಂಡಿರುವ ಜನಾಂದೋಲನ ಸಭೆಗೆ ಮುನ್ನ ಇಂದು ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಬೈಕ್ ರೈಡ್ ನಡೆಸಿದರು. ಈ ವೇಳೆ ಡಿಕೆ ಶಿವಕುಮಾರ್ ಮಾಗಡಿ ಶಾಸಕ ಬಾಲಕೃಷ್ಣ ಜೊತೆ ಬೈಕ್ ರೈಡ್ ಮಾಡಿ ಗಮನ ಸೆಳೆದರು.
ರಾಜ್ಯ ಬಿಜೆಪಿ ನಾಯಕರು ಮುಡಾ ಹಗರಣ ವಿಚಾರವಾಗಿ ಮೈಸೂರಿಗೆ ಪಾದ ಯಾತ್ರೆ ನಡೆಸಲಿದ್ದಾರೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಖಂಡಿಸಿ ಜನಾಂದೋಲನ ಸಭೆ ನಡೆಸುತ್ತಿದೆ. ಇದರ ಪೂರ್ವಭಾವಿಯಾಗಿ ಇಂದು ಬಿಡದಿಯಿಂದ ಬೈಕ್ ರಾಲಿ ನಡೆಯಿತು.
ಈ ವೇಳೆ ಮಾಗಡಿ ಶಾಸಕ ಬಾಲಕೃಷ್ಣ ಬುಲೆಟ್ ಬೈಕ್ ಓಡಿಸಿದರೆ ಅವರ ಹಿಂದೆ ಡಿಸಿಎಂ ಡಿಕೆ ಶಿವಕುಮಾರ್ ಕೂತು ಸವಾರಿ ಮಾಡಿದರು. ದಾರಿಯುದ್ಧಕ್ಕೂ ಕಾಂಗ್ರೆಸ್ ಕಾರ್ಯಕರ್ತರು ಅಭಿಮಾನಿಗಳತ್ತ ಕೈ ಬೀಸುತ್ತಾ ಸಾಗಿದ ಡಿಕೆಶಿ ಬೈಕ್ ರೈಡ್ ಎಂಜಾಯ್ ಮಾಡುತ್ತಿದ್ದುದು ಕಂಡುಬಂತು.
ಆಗಸ್ಟ್ 2 ರಿಂದ 9 ರವರೆಗೆ ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಮೈಸೂರಿನಲ್ಲಿ ಸರ್ಕಾರದ ವಿರುದ್ಧ ಬಿಜೆಪಿ ಪಿತೂರಿ ನಡೆಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಜನಾಂದೋಲನ ಸಭೆ ನಡೆಸಲಿದೆ. ಇದರಲ್ಲಿ ಪಕ್ಷದ ಹಿರಿಯ ನಾಯಕರು, ಕಾರ್ಯಕರ್ತರೂ ಭಾಗಿಯಾಗುತ್ತಿದ್ದಾರೆ.