ರಾಜ್ಯದ ಸುಮಾರು 1202 ಸರಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಸುಮಾರು 600 ಪ್ರಾಂಶುಪಾಲರ ಹುದ್ದೆಗಳು ಖಾಲಿ ಇವೆ.
ಈ ಹುದ್ದೆಗಳನ್ನು ಪದೋನ್ನತಿಯಿಂದ ಹಾಗೂ ನೇರ ನೇಮಕಾತಿ ಮೂಲಕ ತುಂಬಿಕೊಳ್ಳುವಂತೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ ಕುಮಾರ ಅವರಿಗೆ ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಮನವಿ ಸಲ್ಲಿಸಿದ್ದಾರೆ.
ಕಳೆದ ಒಂದು ವಾರದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ 117 ಪ್ರಾಂಶುಪಾಲರ ಹುದ್ದೆಗಳಿಗೆ ಮಾತ್ರ ಡಿಪಿಸಿ ಮಾಡಿರುವ ವಿಷಯ ತಿಳಿದು ಬಂದಿದೆ. ಇನ್ನೂ 483 ಹುದ್ದೆಗಳು ಖಾಲಿ ಇವೆ.
ಈ ಹಿನ್ನೆಲೆ ಪದವಿಪೂರ್ವ ಶಿಕ್ಷಣ ಇಲಾಖೆಯ ಶಿಕ್ಷಣದ ಗುಣಮಟ್ಟ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಕಳೆದ 2-3 ವರ್ಷಗಳಿಂದ ಖಾಲಿ ಇರುವ ಎಲ್ಲ ಪ್ರಾಂಶುಪಾಲರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು. ಪದವಿ ಪೂರ್ವ ಇಲಾಖೆಯಲ್ಲಿ ಖಾಲಿ ಇರುವ ಸುಮಾರು 30 ಉಪನಿರ್ದೇಶಕರ ಹುದ್ದೆಗಳನ್ನು ಹಾಗೂ 4 ಜಂಟಿ ನಿರ್ದೇಶಕರ ಹುದ್ದೆಗಳನ್ನೂ ಕೂಡಾ ಪದೋನ್ನತಿ ಮೂಲಕ ತುಂಬಲು ತಕ್ಷಣ ಕ್ರಮ ಜರುಗಿಸುವಂತೆ ಸಂಕನೂರ ಒತ್ತಾಯಿಸಿದ್ರು.