ಬೆಂಗಳೂರು: ತಮಿಳುನಾಡಿನಲ್ಲಿ ಫೆಂಗಲ್ ಚಂಡಮಾರುತ ಪ್ರಭಾವದಿಂದ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಲ್ಲಿ ಭಾರೀ ಮಳೆಯಾಗಿತ್ತು. ಇದು ಟೊಮೆಟೊ ಬೆಳೆಯ ಮೇಲೂ ಪ್ರಭಾವ ಬೀರಿದೆ.
ಅಕಾಲಿಕ ಮಳೆಯಿಂದ ಹೆಚ್ಚು ನಷ್ಟ ಅನುಭವಿಸುವವರು ರೈತರು ಮತ್ತು ಗ್ರಾಹಕರು. ಈ ಬಾರಿ ಕೋಲಾರ ಸೇರಿದಂತೆ ರಾಜ್ಯದ ಟೊಮೆಟೊ ಬೆಳೆಯುವ ಪ್ರದೇಶಗಳಲ್ಲಿ ಫೆಂಗಲ್ ಚಂಡಮಾರುತದ ಪರಿಣಾಮ ಭಾರೀ ಮಳೆಯಾಗಿದೆ. ಇದರಿಂದಾಗಿ ಟೊಮೆಟೊ ಬೆಳೆಗೆ ಭಾರೀ ಹಾನಿಯಾಗಿದೆ.
ಪರಿಣಾಮ ಈಗ ಸರಿಯಾಗಿ ಹಣ್ಣಾಗದ ಟೊಮೆಟೊಗಳೇ ಬರುತ್ತಿವೆ. ಈ ಟೊಮೆಟೊಗಳಿಗೂ ದರ ವಿಪರೀತ ಹೆಚ್ಚಾಗಿದೆ. ಟೊಮೆಟೊಗೆ ಬೇಡಿಕೆ ಹೆಚ್ಚಾಗಿದ್ದು ಬೆಳೆ ಕಡಿಮೆಯಾಗಿದೆ. ಇದರಿಂದಾಗಿ ಟೊಮೆಟೊ ದರದಲ್ಲಿ ಭಾರೀ ಏರಿಕೆಯಾಗಿದ್ದು, ಗ್ರಾಹಕನಿಗೂ ಬೆಲೆ ಏರಿಕೆಯ ಬಿಸಿ ತಟ್ಟಿದೆ.
ಹಣ್ಣುಗಳ ಬದಲು ಟೊಮೆಟೊಗಳನ್ನು ಕಾಯಿ ಮಾರಾಟ ಮಾಡಲಾಗುತ್ತಿದ್ದು 14 ಕೆಜಿ ಬಾಕ್ಸ್ ಹೋಲ್ ಸೇಲ್ ದರ 800 ರೂ. ಆಗಿದೆ. ಮಳೆ ಇನ್ನಷ್ಟು ದಿನ ಇದ್ದರೆ ಮತ್ತಷ್ಟು ದರ ಹೆಚ್ಚಳವಾಗುವ ಸಾಧ್ಯತೆಯಿದೆ. ಕಳೆದ ಬಾರಿಯೂ ಅಕಾಲಿಕ ಮಳೆಯಾದಾಗ ಟೊಮೆಟೊ, ಈರುಳ್ಳಿ ಬೆಲೆ ವಿಪರೀತ ಹೆಚ್ಚಾಗಿತ್ತು.