ಜೇಬಲ್ಲಿ 10 ರೂ. ಇಲ್ಲ. ಆದರೂ 10 ಲಕ್ಷ ರೂ. ಕಾರು ಕೇಳ್ತಿಯ? ಹೊರಗೆ ಹೋಗು ಎಂದು ಅಪಮಾನಿಸಿದ ಸೇಲ್ಸ್ ಮನ್ ಮುಖಕ್ಕೆ 10 ನಿಮಿಷದಲ್ಲೇ 10 ಲಕ್ಷ ರೂ. ತಂದು ಮುಖಕ್ಕೆ ಬಿಸಾಡಿದ ಘಟನೆ ತುಮಕೂರಿನಲ್ಲಿ ನಡೆದಿದ್ದು, ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತುಮಕೂರಿನ ಮಹೀಂದ್ರ ಶೋರೂಂಗೆ ಭೇಟಿ ನೀಡಿದ್ದ ರೈತ ಕೆಂಪೇಗೌಡ ಬೊಲೆರೋ ಪಿಕಪ್ ಕಾರಿನ ಬಗ್ಗೆ ಮಾಹಿತಿ ಕೇಳಿದ್ದಾರೆ. ಆದರೆ ಸೇಲ್ಸ್ ಮನ್ ಈತ ರೈತ ಎಂದು ಗೊತ್ತಾಗುತ್ತಿದ್ದಂತೆ ಬಾಯಿಗೆ ಬಂದಂತೆ ನಿಂದಿಸಿ ಶೋರೂಂ ನಿಂದ ಹೊರಗೆ ಹೋಗುವಂತೆ ತಿಳಿಸಿದ್ದಾರೆ.
ಜೇಬಲ್ಲಿ 10 ರೂ. ಇಲ್ಲ. ಆದರೂ 10 ಲಕ್ಷ ರೂ. ಬೆಲೆಯ ಕಾರಿನ ಬಗ್ಗೆ ಕೇಳ್ತಿಯ? ಕಾರನ್ನು ಖರೀದಿಸುವ ಯೋಗ್ಯತೆ ನಿನಗಿದೆಯಾ? ಮೊದಲು ಹೊರಗೆ ಹೋಗು ಎಂದು ಅಪಮಾನಿಸಿದ್ದಾನೆ. ಆದರೆ ಕೆಂಪೇಗೌಡ ಒಂದು ಗಂಟೆಯಲ್ಲಿ ಹಣ ತರ್ತಿನಿ ಕಾರು ಡೆಲಿವರಿ ಕೊಡಲು ವ್ಯವಸ್ಥೆ ಮಾಡು ಎಂದು ಸವಾಲು ಹಾಕಿದ್ದಾನೆ.
ಕೆಂಪೇಗೌಡ, ಒಂದೇ ಗಂಟೆಯಲ್ಲಿ ಶೋ ರೂಂಗೆ ಮರಳಿದ್ದು, 10 ಲಕ್ಷ ರೂ. ತಂದು ಕಾರು ಕೊಡುವಂತೆ ಹೇಳಿದ್ದಾನೆ. ಆದರೆ ಸೇಲ್ಸ್ ಮನ್ ಆಘಾತಕ್ಕೆ ಒಳಗಾಗಿದ್ದು, ಕಾರು ಹಸ್ತಾಂತರಿಸಲು ಕನಿಷ್ಠ 4 ದಿನ ಬೇಕು ಎಂದು ಹೇಳಿದ್ದಾನೆ. ಆದರೆ ರೈತನನ್ನು ಅಪಮಾನಿಸುತ್ತಿಯ ಎಂದು ಕೆಂಪೇಗೌಡ ಮತ್ತು ಸ್ನೇಹಿತರು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ವೇಳೆ ಪರಿಸ್ಥಿತಿ ಕೈ ಮೀರುವ ಹಂತ ತಲುಪುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ತಿಳಿಗೊಳಿಸಿದ್ದಾರೆ. ಈ ವೇಳೆ ಸೇಲ್ಸ್ ಮನ್ ಕ್ಷಮೆಯಾಚಿಸಿದ್ದು, ಕೆಂಪೇಗೌಡ, ನಿನ್ನ ಶೋ ರೂಂನಲ್ಲಿ ಕಾರು ಖರೀದಿಸುವುದಿಲ್ಲ ಎಂದು ಹೇಳಿ 10 ಲಕ್ಷ ರೂ.ನೊಂದಿಗೆ ಮರಳಿದ್ದಾರೆ.