ಬೆಂಗಳೂರು: ಕಾಡುಗಳ್ಳ ವೀರಪ್ಪನ್ ಇದ್ದಾಗ ಅರಣ್ಯ ಸೇಫ್ ಆಗಿತ್ತು. ಆದರೆ ಈಗ ಅಕ್ರಮ ಚಟುವಟಿಕೆಗಳೇ ಹೆಚ್ಚಾಗಿದೆ ಎಂದು ಅರಣ್ಯ ಸಚಿವರ ಮುಂದೆ ರೈತರು ಆಕ್ರೋಶ ಹೊರಹಾಕಿದ್ದಾರೆ.
ಚಾಮರಾಜನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು, ರೈತರು ಪಾಲ್ಗೊಂಡಿದ್ದಾರೆ. ಈ ವೇಳೆ ರೈತ ಮುಖಂಡರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಈ ವೇಳೆ ರೈತ ಮುಖಂಡ ಎಚ್ ಸಿ ಮಹೇಶ್ ಕುಮಾರ್, ಕಾಡುಗಳ್ಳ ವೀರಪ್ಪನ್ ಇರುವಾಗಲೇ ಕಾಡು ಚೆನ್ನಾಗಿತ್ತು. ಆದರೆ ಈಗ ಅಕ್ರಮಗಳು ಹೆಚ್ಚಾಗಿವೆ. ಇದನ್ನು ನೋಡುತ್ತಿದ್ದರೆ ಆತ ಇದ್ದಿದ್ದರೆ ಚೆನ್ನಾಗಿತ್ತು ಎನಿಸುತ್ತಿದೆ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.
ಇದಕ್ಕೆ ಇತರ ನಾಯಕರೂ ಧ್ವನಿಗೂಡಿಸಿದ್ದಾರೆ. ಕಾಡುಗಳ್ಳ ಇದ್ದಾಗ ಅರಣ್ಯ ಪ್ರದೇಶದಲ್ಲಿ ರೆಸಾರ್ಟ್, ಗಣಿಗಾರಿಕೆ ಮಾಡಲು ಧೈರ್ಯ ಇರಲಿಲ್ಲ. ಆದರೆ ಈಗ ಯಾರ ಭಯವೂ ಇಲ್ಲ, ಕಾಡಿನ ಪ್ರದೇಶದಲ್ಲಿ ಅಕ್ರಮ ಚಟುವಟಿಕೆಗಳು ಹೆಚ್ಚಾಗಿವೆ ಎಂದು ಆಕ್ರೋಶ ಹೊರಹಾಕಿದ್ದಾರೆ.