ಸಾಗರ: ಸಿಗಂದೂರು ಚೌಡೇಶ್ವರಿ ಅಮ್ಮನ ದರ್ಶನ ಪಡೆಯುವಷ್ಟೇ ಲಾಂಚ್ ನಲ್ಲಿ ಶರವಾತಿ ಹಿನ್ನೀರು ಪ್ರದೇಶವನ್ನು ದಾಟುವ ಸಂಭ್ರಮ ಎಲ್ಲರಲ್ಲಿರುತ್ತದೆ. ಆದರೆ ಇದು ಇನ್ನು ಕೆಲವೇ ದಿನ ಮಾತ್ರ ಎಂಬುದು ಬೇಸರದ ಸಂಗತಿ.
ಸ್ವಾತಂತ್ರ್ಯ ಬಂದು ಇಷ್ಟು ದಿನವಾದರೂ ಇಲ್ಲಿ ಹಿನ್ನೀರು ದಾಟಬೇಕಾದರೆ ಲಾಂಚ್ ಮೊರೆ ಹೋಗಬೇಕಾಗಿತ್ತು. ಆದರೆ ಈಗಷ್ಟೇ ಸೇತುವೆ ನಿರ್ಮಾಣವಾಗುತ್ತಿದ್ದು ಬಹುತೇಕ ಕೊನೆಯ ಹಂತಕ್ಕೆ ಬಂದಿದೆ. ಹೀಗಾಗಿ ಇನ್ನು ಲಾಂಚ್ ನೆನಪು ಮಾತ್ರ ಎನ್ನಬಹುದು.
ಇದರ ಬಗ್ಗೆ ಸ್ಥಳೀಯರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಇಲ್ಲಿ ಲಾಂಚ್ ನ್ನೇ ನಂಬಿಕೊಂಡು ಬದುಕುವ ಅನೇಕರಿದ್ದಾರೆ. ವಿಶೇಷವಾಗಿ ಜೀಪ್ ಚಾಲಕರು ಇದನ್ನೇ ಹೊಟ್ಟೆ ಪಾಡು ಮಾಡಿಕೊಂಡಿದ್ದಾರೆ. ಸಿಗಂದೂರು ಚೌಡೇಶ್ವರಿ ದೇವಾಲಯದಿಂದ ಹೊಳೆಬದಿಗೆ ಪ್ರತಿನಿತ್ಯವೂ ಬಾಡಿಗೆ ಮಾಡಿಕೊಳ್ಳುತ್ತಿದ್ದಾರೆ. ಇದು ಇಲ್ಲಿನ ಅನೇಕರಿಗೆ ಹೊಟ್ಟೆಪಾಡಿನ ವಿಚಾರ.
ಆದರೆ ಈಗ ಲಾಂಚ್ ಆಗುವುದರಿಂದ ಇಂತಹ ಜೀಪ್ ಮಾಲಿಕರಿಗೆ ಉದ್ಯೋಗವಿಲ್ಲದಂತಾಗುತ್ತದೆ. ಇನ್ನು ಲಾಂಚ್ ದಾಟುವ ಮಜಾ ಪಡೆಯುವುದಕ್ಕೆಂದೇ ಅನೇಕ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುವುದಿದೆ. ಹೀಗಾಗಿ ಸಂಪೂರ್ಣವಾಗಿ ಲಾಂಚ್ ನಿಲ್ಲಿಸಿದರೆ ಪ್ರವಾಸಿಗರ ಸಂಖ್ಯೆಯೂ ಕಡಿಮೆಯಾಗಬಹುದು ಎಂಬ ಆತಂಕವಿದೆ.
ಸ್ಥಳೀಯರ ಪ್ರಕಾರ ಇದರಿಂದ ಉಪಕಾರವೂ ಇದೆ. ಲಾಂಚ್ ಬರುವುದನ್ನು ಕಾಯುತ್ತಾ ಒಂದು ತುದಿಯಿಂದ ಇನ್ನೊಂದು ತುದಿಗೆ ಹೋಗುವುದಕ್ಕೆ ಸಾಕಷ್ಟು ಸಮಯ ಹಿಡಿಯುತ್ತದೆ. ಆದರೆ ಇನ್ನು ಸೇತುವೆ ಆದರೆ ಕಾಯುವ ಅಗತ್ಯವಿಲ್ಲ. ಹೀಗಾಗಿ ಸಮಯ ಉಳಿತಾಯವಾಗಬಹದು ಎಂಬ ನಂಬಿಕೆಯಿದೆ.
ಆದರೆ ಸೇತುವೆ ಪೂರ್ಣಗೊಳ್ಳಲು ಕನಿಷ್ಠ ಐದಾರು-ತಿಂಗಳು ಬೇಕಾದೀತು. ಅದಾದ ಬಳಿಕ ಶರಾವತಿ ಹಿನ್ನೀರಿನಲ್ಲಿ ಪ್ರಯಾಣಿಕರನ್ನು ಹೊತ್ತೊಯ್ಯಲು ಲಾಂಚ್ ಬಳಸಬಹುದು. ಅದೂ ಒಂದು ಪ್ರವಾಸೀ ಆಕರ್ಷಣೆಯಾಗಿ ಬಳಕೆಯಾದರೆ ಬಾಡಿಗೆ ಜೀಪ್, ಸ್ಥಳೀಯ ಸಣ್ಣ ಪುಟ್ಟ ಅಂಗಡಿ ಮಾಲಿಕರ ಜೀವನವೂ ನಿರಾತಂಕವಾಗಿ ನಡೆಯಬಹುದು.