Publish Date: Thu, 30 Jan 2025 (19:57 IST)
Updated Date: Thu, 30 Jan 2025 (20:00 IST)
ಶಿವಮೊಗ್ಗ: ಈ ಹಿಂದೆ ರಾಯಣ್ಣ ಬ್ರಿಗೇಡ್ ಆರಂಭಿಸಿ ಬಿಜೆಪಿಗೆ ಸಡ್ಡು ಹೊಡೆದಿದ್ದ ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಅವರು ಇದೀಗ ಕ್ರಾಂತಿ ವೀರ ಬ್ರಿಗೇಡ್ ಸಂಘಟನೆ ಘೋಷಿಸಿ ಮತ್ತೇ ಬಿಜೆಪಿಗೆ ಸೆಡ್ಡು ಹೊಡೆಯಲು ಮುಂದಾಗಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಜಾತಿಗಳ ಮಠಾಧೀಶರುಗಳು ಕ್ರಾಂತಿವೀರ ಬ್ರಿಗೇಡ್ ಒಳಗೊಳ್ಳಲಿದ್ದಾರೆ. ಹಿಂದೂಗಳ ಏಕೀಕರಣಕ್ಕಾಗಿ ಕೆಲಸ ಮಾಡಲಿದೆ. ಈ ಸಂಘಟನೆ ಫೆಬ್ರವರಿ 4 ರಂದು ಬಸವನ ಬಾಗೇವಾಡಿಯಲ್ಲಿ ಉದ್ಘಾಟನೆಯಾಗಲಿದೆ ಎಂದು ಈಶ್ವರಪ್ಪ ಅವರು ಗುರುವಾರ ತಿಳಿಸಿದ್ದಾರೆ.
ರಾಜ್ಯದಲ್ಲಿ ಹಿಂದುತ್ವವನ್ನು ಉಳಿಸಲು ಕೆಲಸ ಮಾಡುವ ಮಠಾಧೀಶರ ವೇದಿಕೆ ರಚನೆಗೆ ನೇತೃತ್ವ ವಹಿಸುವಂತೆ ಉತ್ತರ ಕರ್ನಾಟಕದ ಮಠಾಧೀಶರು ತಮ್ಮನ್ನು ಕೇಳಿಕೊಂಡಿದ್ದರು ಎಂದು ಈಶ್ವರಪ್ಪ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಈ ವೇದಿಕೆಯನ್ನು ಕ್ರಾಂತಿವೀರ ಬ್ರಿಗೇಡ್ ಎಂದು ಹೆಸರಿಸಲಾಗಿದೆ. ನಾನು ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಪ್ರಯಾಣಿಸಿದೆ ಮತ್ತು ಹೆಚ್ಚು ಅಭಿವೃದ್ಧಿ ಹೊಂದಿಲ್ಲದ ಎಲ್ಲಾ ಜಾತಿಗಳ ಮಠಗಳಿಗೆ ಭೇಟಿ ನೀಡಿದ್ದೇನೆ ಎಂದು ಮಾಹಿತಿ ಹಂಚಿಕೊಂಡರು.
12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರ ಜನ್ಮಸ್ಥಳ ಬಸವನ ಬಾಗೇವಾಡಿಯಲ್ಲಿ ಕ್ರಾಂತಿ ವೀರ ಬ್ರಿಗೇಡ್ ಉದ್ಘಾಟನೆಗೊಳ್ಳಲಿದೆ ಎಂದು ಈಶ್ವರಪ್ಪ ತಿಳಿಸಿದ್ದಾರೆ.