ಬೆಂಗಳೂರು: ಖಾತೆ ಬದಲಾವಣೆ ವಿಚಾರವಾಗಿ ಪಟ್ಟು ಹಿಡಿದಿದ್ದ ಸಚಿವ ಆನಂದ್ ಸಿಂಗ್ ಅವರು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದರು. ಸಿಎಂ ಭೇಟಿಯ ಬಳಿಕ ಆನಂದ್ ಸಿಂಗ್ ತಮ್ಮ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
ಇಂದು ಬೆಳಿಗ್ಗೆ ಬಿಜೆಪಿ ಕಚೇರಿಯಲ್ಲಿ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನೂ ಆನಂದ್ ಸಿಂಗ್ ಭೇಟಿ ಮಾಡಿದ್ದರು.
ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ತನಗೆ ನೀಡಲಾಗಿರುವ ಪರಿಸರ ಮತ್ತು ಪ್ರವಾಸೋದ್ಯಮ ಖಾತೆಯನ್ನು ಬದಲಿಸಬೇಕು ಎಂದು ಆನಂದ್ ಸಿಂಗ್ ಪಟ್ಟು ಹಿಡಿದಿದ್ದರು. ರಾಜೀನಾಮೆ ನೀಡುವ ಹೇಳಿಕೆಯನ್ನೂ ನೀಡಿದ್ದರು. ನಂತರ ಬೊಮ್ಮಾಯಿ- ಬಿಎಸ್ ವೈ ಜೊತೆ ಮಾತುಕತೆ ನಡೆಸಿದ್ದರು. ಖಾತೆ ಹಂಚಿಕೆಯಾಗಿ ಕೆಲವು ವಾರಗಳು ಕಳೆದರೂ ಆನಂದ್ ಸಿಂಗ್ ಇನ್ನೂ ಅಧಿಕಾರ ಸ್ವೀಕರಿಸಿಲ್ಲ. ಆದರೆ ಸದ್ಯ ಆನಂದ್ ಸಿಂಗ್ ಶಾಂತರಾಗಿದ್ದಾರೆ, ಕೊಟ್ಟಿರುವ ಖಾತೆಯಲ್ಲೇ ಮುಂದುವರಿಯಲಿದ್ದಾರೆ ಎನ್ನಲಾಗಿದೆ. ಆದರೆ ಕೊನೆಯ ಪ್ರಯತ್ನವಾಗಿ ಇಂದು ಸಿಎಂ ಭೇಟಿಯಾಗಿದ್ದಾರೆ ಎನ್ನಲಾಗಿತ್ತು.
ಸಿಎಂ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆನಂದ್ ಸಿಂಗ್, ಮೊದಲು ಖಾತೆಯನ್ನು ನಿರ್ವಹಿಸಿ ಎಂದು ಸಿಎಂ ಬೊಮ್ಮಾಯಿ ಮತ್ತು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಅವರ ಆದೇಶದಂತೆ ಖಾತೆಯನ್ನು ಇಂದು ವಹಿಸಿಕೊಳ್ಳುತ್ತೇನೆ. ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದರು.