ಮೈಸೂರು: ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಇಡಿ) ದ ಮೇಲೆ ಅವ್ಯವಹಾರ ಆರೋಪ ಹಿನ್ನಲೆಯಲ್ಲಿ ದಾಳಿ ನಡೆಸುತ್ತಿರುವ ಇಡಿ ಅಧಿಕಾರಿಗಳು ರಾತ್ರಿಯೂ ಕಚೇರಿಯಲ್ಲೇ ಉಳಿದುಕೊಂಡು ಕಡತಗಳನ್ನು ಪರಿಶೀಲಿಸುತ್ತಿದ್ದಾರೆ.
ಮುಡಾ ಕಚೇರಿ ಮತ್ತು ಮುಡಾ ಪ್ರಕರಣದ ಎ4 ಆರೋಪಿ ದೇವರಾಜು ಮನೆ ಮೇಲೆ ನಿನ್ನೆ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು ಕಡತಗಳ ಪರಿಶೀಲನೆ ಆರಂಭಿಸಿದ್ದರು. ನಿನ್ನೆ ರಾತ್ರಿಯೂ ಮುಡಾ ಕಚೇರಿಯಲ್ಲೇ ಕಳೆದು ನಿರಂತರವಾಗಿ ಕಡತ ಪರಿಶೀಲನೆ ನಡೆಸುತ್ತಲೇ ಇದ್ದಾರೆ. ಮುಡಾದಲ್ಲಿ ಸಾವಿರಾರು ಕೋಟಿ ರೂ. ಅವ್ಯವಹಾರವಾಗಿದೆ ಎಂದು ಆರೋಪ ಬಂದಿದೆ.
ಈ ಹಿನ್ನಲೆಯಲ್ಲಿ ಇಡಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ವಿಶೇಷವಾಗಿ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹೆಸರಿನಲ್ಲಿ ನೀಡಲಾಗಿದ್ದ 14 ಸೈಟುಗಳ ಬಗ್ಗೆ ತೀವ್ರ ವಿಚಾರಣೆ ನಡೆಸಿದ್ದಾರೆ. ಇಂದೂ ಕೂಡಾ ಮುಡಾ ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ಮುಂದುವರಿಯಲಿದೆ.
ಸಿದ್ದರಾಮಯ್ಯ ಪತ್ನಿಗೆ ಬದಲಿ ಸೈಟು ನೀಡಿದ ವಿಚಾರದ ಬಗ್ಗೆಯೇ ಇಡಿ ಅಧಿಕಾರಿಗಳು ವಿಶೇಷವಾಗಿ ದೇವರಾಜು ಅವರನ್ನು ವಿಚಾರಣೆ ನಡೆಸಿದ್ದಾರೆ. ಈ ಬಗ್ಗೆ ಸುಮಾರು 41 ಪ್ರಶ್ನೆಗಳನ್ನು ಕೇಳಿದ್ದಾರೆ. ಇವುಗಳಿಗೆ ದಾಖಲೆಗಳನ್ನು ನೀಡಲು ಸೂಚಿಸಿದ್ದಾರೆ. ಒತ್ತುವರಿ ಪರಿಹಾರವಾಗಿ ನೀಡಿರುವ ಜಮೀನಿಗೆ ಮಾನದಂಡಗಳೇನು ಎಂದು ಪ್ರಶ್ನೆ ಮಾಡಿದ್ದಾರೆ. ಇಂದೂ ಕೂಡಾ ಇಡಿ ಗ್ರಿಲ್ ಮುಂದುವರಿಯಲಿದೆ.