ಕಲಬುರಗಿ: ಡ್ರಗ್ಸ್ ಮಾರಾಟ ಪ್ರಕರಣ ಸಂಬಂಧ ಮಹಾರಾಷ್ಟ್ರ ಪೊಲೀಸರು ಕಲಬುರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ್ ಕಣ್ಣಿ ಅವರನ್ನು ಸೋಮವಾರ ಬಂಧಿಸಿದ ಬೆನ್ನಲ್ಲೇ ಕಲಬುರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.
ಗುಲ್ಬರ್ಗ ದಕ್ಷಿಣ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಲಿಂಗರಾಜ್ ಕಣ್ಣಿ ಅವರು ಮಾದಕ ದ್ರವ್ಯ ಮಾರಾಟದಲ್ಲಿ ಭಾಗಿಯಾಗಿದ್ದಾರೆಂಬ ಆರೋಪ ಬಂದ ನಂತರ ತಕ್ಷಣದಿಂದ ಜಾರಿಗೆ ಬರುವಂತೆ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅವರನ್ನು ಉಚ್ಚಾಟಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಸಂಬಂಧ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರತಿಪಕ್ಷ ಬಿಜೆಪಿ, ಕಣ್ಣಿ ಅವರು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತರು ಎಂದು ಹೇಳಿದೆ.
"ಮಾದಕ ದ್ರವ್ಯ ಚಟುವಟಿಕೆಗಳಲ್ಲಿ ಸಚಿವರೊಬ್ಬರ ಆಪ್ತರು ಮತ್ತು ಜಿಲ್ಲಾ ಮಟ್ಟದ ಕಾಂಗ್ರೆಸ್ ನಾಯಕನ ಬಂಧನವು ಕಾಂಗ್ರೆಸ್ ಪಕ್ಷದ ನೈತಿಕ ಪತನಕ್ಕೆ ಸಾಕ್ಷಿಯಾಗಿದೆ" ಎಂದು ಬಿಜೆಪಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಿಯಾಂಕ್ ಖರ್ಗೆ ಮತ್ತು ಕಣ್ಣಿ ಅವರ ಚಿತ್ರಗಳನ್ನು ಪೋಸ್ಟ್ ಮಾಡಿ ಪ್ರಶ್ನೆ ಮಾಡಿದೆ.