ಬೆಂಗಳೂರು ಟೆಕ್ ಸಮ್ಮಿಟ್ಗೆ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಮೂಲಕ ಚಾಲನೆ ನೀಡಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮಾವೇಶ ಆರಂಭಗೊಂಡಿದ್ದು, ಏಷ್ಯಾ ಖಂಡದಲ್ಲೇ ಮಹತ್ವದ ಕಾರ್ಯಕ್ರಮವೆಂದು ಹೆಸರಾಗಿರುವ ಈ ತಂತ್ರಜ್ಞಾನ ಸಮಾವೇಶ ಬೆಂಗಳೂರು ಅರಮನೆ ಮೈದಾನದಲ್ಲಿ 3 ದಿನಗಳ ಕಾಲ ನಡೆಯಲಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಸಚಿವರಾದ ಡಾ. ಅಶ್ವತ್ಥ ನಾರಾಯಣ, ಮುರುಗೇಶ್ ಆರ್ ನಿರಾಣಿ, ಬಯೋಟೆಕ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ, ಸಂಯುಕ್ತ ಅರಬ್ ಸಂಸ್ಥಾನದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಖಾತೆಯ ಸಹಾಯಕ ಸಚಿವ ಒಮರ್ ಬಿನ್ ಸುಲ್ತಾನ್ ಅಲ್ ಒಲಾಮಾ, ಆಸ್ಟ್ರೇಲಿಯಾದ ವಿದೇಶಾಂಗ ಖಾತೆ ಸಹಾಯಕ ಸಚಿವ ಟಿಮ್ ವ್ಯಾಟ್ಸ್, ಫಿನ್ಲೆಂಡ್‌ನ ವಿಜ್ಞಾನ ಸಚಿವ ಪೆಟ್ರಿ ಹಾನ್ಕೊನೆನ್, ಭಾರತದ ಪ್ರಪ್ರಥಮ ಯೂನಿಕಾರ್ನ್ ಕಂಪನಿ 'ಇಮ್ಮೊಬಿ'ಯ ಸಂಸ್ಥಾಪಕ ನವೀನ್ ತೆವಾರಿ, ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರೋನ್ (ವರ್ಚುಯಲ್) ಮತ್ತು ಅಮೆರಿಕದ ಕಿಂಡ್ರಿಲ್ ಕಂಪನಿಯ ಸಿಇಒ ಮಾರ್ಟಿನ್ ಶ್ರೋಟರ್ ಭಾಗಿಯಾಗಿದ್ದಾರೆ. ಸಮಾವೇಶದಲ್ಲಿ ಸುಮಾರು 75 ಗೋಷ್ಠಿಗಳು ನಡೆಯಲಿವೆ. ಕೃತಕ ಬುದ್ಧಿಮತ್ತೆ, ಬಿಗ್ ಡೇಟಾ, ಸೆಮಿಕಂಡಕ್ಟರ್, ಮಷೀನ್ ಲರ್ನಿಂಗ್, 5ಜಿ, ರೋಬೋಟಿಕ್ಸ್, ಫಿನ್ ಟೆಕ್, ಜೀನ್ ಎಡಿಟಿಂಗ್, ಮೆಡಿ ಟೆಕ್, ಸ್ಪೇಸ್ ಟೆಕ್, ಜೈವಿಕ ಇಂಧನ ಸುಸ್ಥಿರತೆ, ಇ- ಸಂಚಾರ ಹೀಗೆ ವಿವಿಧ ತಾಂತ್ರಿಕ ಬೆಳವಣಿಗೆಗಳ ಬಗ್ಗೆ ಸಂವಾದಗಳು ನಡೆಯಲಿವೆ.