ಬೆಂಗಳೂರು: ವಕ್ಫ್ ನೋಟಿಸ್ ವಿರುದ್ಧ ಸಿಡಿದೆದ್ದ ರಾಜ್ಯ ಬಿಜೆಪಿ ನಾಯಕರು ಇಂದು ಚಿಕ್ಕಬಳ್ಳಾಪುರದಲ್ಲಿ ಭಾರೀ ಪ್ರತಿಭಟನೆ ನಡೆಸಿದೆ. ವಕ್ಫ್ ವಿವಾದದ ವಿರುದ್ಧ ಪ್ರತಿಭಟನೆ ವೇಳೆ ಚಿಕ್ಕಬಳ್ಳಾಪುರ ಸಂಸದ ಡಾ ಕೆ ಸುಧಾಕರ್ ಮಾತನಾಡಿದ್ದಾರೆ.
ಯಾವೆಲ್ಲಾ ಆಸ್ತಿಗಳನ್ನು ನಾವು ವಶಪಡಿಸಿಕೊಳ್ಳಬಹುದೋ ಅದನ್ನೆಲ್ಲಾ ವಶಪಡಿಸಿಕೊಳ್ಳೋಣ ಎಂದು ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ಎಸಿಗಳಿಗೆ, ತಹಶೀಲ್ದಾರುಗಳಿಗೆ ಒತ್ತಡ ತಂದು ವಕ್ಫ್ ಆಸ್ತಿಯಾಗಿ ಸೇರಿಸಿಕೊಳ್ಳುತ್ತಿದ್ದಾರೆ. ಆದರೆ ನೀವು ಏನು ಸೇರಿಸ್ತೀರೋ ಸೇರಿಸಿಕೊಳ್ಳಿ. ಆದರೆ 15 ದಿನಗಳೊಳಗೆ ಅದನ್ನೆಲ್ಲಾ ವಾಪಸ್ ಮಾಡುವ ಕೆಲಸವನ್ನು ನಾವು ವಿರೋಧ ಪಕ್ಷದ ನಾಯಕರು ಮಾಡುತ್ತೇವೆ ಎಂದು ಸುಧಾಕರ್ ಭರವಸೆ ನೀಡಿದ್ದಾರೆ.
ತಲೆತಲಾಂತರದಿಂದ ಬಂದ ಆಸ್ತಿಗಳು ವಕ್ಫ್ ಎಂದು ನಮೂದಾಗಿದೆ. ರೈತ ಬಂಧುಗಳೇ ನೀವೂ ಒಂದು ಸಾರಿ ಪಹಣಿ ಚೆಕ್ ಮಾಡಿಕೊಳ್ಳಿ. ಯಾರ ಆಸ್ತಿ ವಕ್ಫ್ ಎಂದು ಮಾಡಿಕೊಂಡಿದ್ದಾರೋ ನೋಡಿಕೊಳ್ಳಿ. ನಮ್ಮದೂ ಒಮ್ಮೆ ಚೆಕ್ ಮಾಡಬೇಕು. ನಾವು ಚೆಕ್ ಮಾಡಿಲ್ಲ ಅಂದರೆ ನಮ್ಮದೂ ವಕ್ಫ್ ಮಾಡಿಬಿಡುತ್ತಾರೆ ಅಶೋಕಣ್ಣ ಎಂದು ಆರ್ ಅಶೋಕ್ ಬಳಿ ಹಾಸ್ಯ ಮಾಡಿದ್ದಾರೆ.
ನಾವು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿರಬಹುದು. ಹಾಗಂತ ಸತ್ತಿಲ್ಲ. ಮತ್ತೆ ನಾವು ಅಧಿಕಾರಕ್ಕೆ ಬರುತ್ತೇವೆ. ಈಗ ಆಗಿರುವ ಅನ್ಯಾಯಗಳನ್ನೆಲ್ಲಾ ಸರಿಪಡಿಸಿಕೊಳ್ತೇವೆ. ನಮ್ಮ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯನವರು ಓದಿದ ಶಾಲೆಯನ್ನೂ ವಕ್ಫ್ ಗೆ ಸೇರಿಸಿದ್ದಾರೆ. ಚಿಕ್ಕತಿರುಪತಿಯಲ್ಲಿ ಒಬ್ಬನೇ ಒಬ್ಬ ಅಲ್ಪಸಂಖ್ಯಾತರಿಲ್ಲ. ಅಲ್ಲಿ 100 ಎಕರೆ ಭೂಮಿಯನ್ನು ವಕ್ಫ್ ಗೆ ಸೇರಿಸಿದ್ದಾರೆ. ಇದೆಲ್ಲಾ ಯಾಕೆ ಆತುರವಾಗಿ ಮಾಡ್ತಿದ್ದಾರೆ ಎಂದರೆ, ಮುಂದೆ ಸಂಸತ್ ನಲ್ಲಿ ನರೇಂದ್ರ ಮೋದಿಯವರು ವಕ್ಫ್ ಗೆ ತಿದ್ದುಪಡಿ ತರುತ್ತಾರೆ ಎಂದು ಈ ರೀತಿ ಮಾಡುತ್ತಿದ್ದಾರೆ ಎಂದು ಡಾ ಕೆ ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ.